ಕಳೆದ 11 ದಿನಗಳಲ್ಲಿ ತಿರುಪತಿ ತಿಮ್ಮಪ್ಪನ ‘ಖಾತೆಗೆ’ ಬಂದ ಹಳೆ ನೋಟು ಎಷ್ಟು ಗೊತ್ತೇ ?

Update: 2017-01-11 15:49 GMT

ತಿರುಪತಿ, ಜ.11: ತಿರುಪತಿ ತಿಮ್ಮಪ್ಪನ ಹುಂಡಿಗೆ ಕಳೆದ 11 ದಿನಗಳಲ್ಲಿ ಕಾಣಿಕೆ ರೂಪದಲ್ಲಿ ಅರ್ಪಿಸಲಾದ ಅಮಾನ್ಯಗೊಂಡಿರುವ ಅಧಿಕ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 1.7 ಕೋಟಿ ರೂ. ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕಿನಲ್ಲಿ ಜಮೆ ಮಾಡುವ ಕಡೆಯ ದಿನವಾದ ಡಿ.30ರ ಮರುದಿನ, ಅಂದರೆ ಡಿ.31ರಂದು ಒಂದೇ ದಿನ 44 ಲಕ್ಷ ರೂ. ಕಾಣಿಕೆ ಹಣ ಹರಿದು ಬಂದಿದೆ.. ಎಲ್ಲವೂ ಹಳೆಯ ನೋಟುಗಳ ರೂಪದಲ್ಲಿ. ಜ.1ರಂದು 31 ಲಕ್ಷ ರೂಪಾಯಿ ಕಾಣಿಕೆ ಹಳೆಯ ನೋಟುಗಳ ರೂಪದಲ್ಲಿ ಸಂದಾಯವಾಗಿತ್ತು. ಮುಂದಿನ ದಿನಗಳಲ್ಲಿ ದೇವಳದ ಹುಂಡಿಗೆ ಬೀಳಲಿರುವ ಹಳೆಯ ನೋಟುಗಳ ಪ್ರಮಾಣ ಇಳಿಮುಖಗೊಳ್ಳಬಹುದು . ಈ ನೋಟುಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

 ತಿರುಪತಿ ತಿಮ್ಮಪ್ಪನ ದೇವಳಕ್ಕೆ ಪ್ರತೀ ವರ್ಷ ವಿಶ್ವದಾದ್ಯಂತ ಸುಮಾರು 2.6 ಕೋಟಿಗೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ ಮತ್ತು ಕಾಣಿಕೆಯ ರೂಪದಲ್ಲಿ ದಿನಂಪ್ರತಿ ಸರಾಸರಿ 2.8 ಕೋಟಿ ರೂ.ನಷ್ಟು ನಗದು ಹಾಗೂ ಚಿನ್ನ ಮತ್ತಿತರ ಹರಕೆಯನ್ನು ಭಕ್ತರು ಹುಂಡಿಗೆ ಅರ್ಪಿಸುತ್ತಾರೆ. ಈಗಷ್ಟೇ ಮುಕ್ತಾಯಗೊಂಡಿರುವ ಕ್ಯಾಲೆಂಡರ್ ವರ್ಷದಲ್ಲಿ(ಜನವರಿಯಿಂದ ಡಿಸೆಂಬರ್) ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯ ಒಟ್ಟು ಮೊತ್ತ 1ಸಾವಿರ ಕೋಟಿ ರೂ. ಎಂದು ದೇವಳದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News