ಕೃಷಿ ಪುನಶ್ಚೇತನಕ್ಕೆ ಯಾಂತ್ರೀಕೃತ ಶಕ್ತಿಯ ಸಮರ್ಪಕ ಬಳಕೆ ಅಗತ್ಯ

Update: 2017-01-11 18:31 GMT

ಬಂಟ್ವಾಳ, ಜ.11: ಭೂ, ಜಲ, ಜನ ಹಾಗೂ ಆಧುನಿಕ ಯಾಂತ್ರೀಕೃತ ಶಕ್ತಿಯ ಸಮರ್ಪಕ ಬಳಕೆಯೊಂದೇ ಕೃಷಿ ವಲಯಕ್ಕೆ ಪುನಶ್ಚೇತನ ನೀಡಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಉತ್ಸವ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಗಾಣದಪಡ್ಪುಮೈದಾನದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಉತ್ಸವ-2012ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಹನೆ, ಕಠಿಣ ಪರಿಶ್ರಮವನ್ನು ಕೃಷಿಗರು ಮೈಗೂಡಿಸಿಕೊಳ್ಳಬೇಕು. ದೂರದೃಷ್ಟಿಯ ಮನೋಭಾವದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರಕಾರ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗ ರಚಿಸಿದ್ದು ಇದು ಕೃಷಿಕರು ಹಾಗೂ ಮಾರುಕಟ್ಟೆಯ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕಿ ಉಳಿಪಾಡಿಗುತ್ತು, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಸತೀಶ್ಚಂದ್ರ, ಉದ್ಯಮಿ ಅಬ್ದುಲ್ ಅಝೀಝ್ ತುಂಬೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವೇದಿಕೆಯಲ್ಲಿ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರುಕ್ಮಯ ಪೂಜಾರಿ, ಎ.ಸಿ.ಭಂಡಾರಿ, ಕಿರಣ್ ಹೆಗ್ಡೆ, ನಾರಾಯಣ ಭಟ್ ಕೆಯ್ಯೂರು, ಹಾಲಿ ಅಧ್ಯಕ್ಷ ಪ್ರಕಾಶ್ ಕಾರಂತ, ಬಂಟ್ವಾಳ ತಾಲೂಕು ಪ್ರ.ಬಂ.ಸ್ವ.ಸ.ಸಂ.ಕೇ.ಒ. ಅಧ್ಯಕ್ಷ ಸದಾನಂದ ಗೌಡ, ಯೋಜನೆಯ ನಿರ್ದೇಶಕರಾದ ಮಹವೀರ ಅಜ್ರಿ, ಚಂದ್ರಶೇಖರ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿಸೋಜ ಸ್ವಾಗತಿಸಿದರು. ತಾಲೂಕು ಯೋಜನಾ ಅಧಿಕಾರಿ ಸುನೀತಾ ನಾಯ್ಕ ವರದಿ ವಾಚಿಸಿದರು. ಪತ್ರಕರ್ತ ಗೋಪಾಲ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಜಯಂತಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೀವಜಲ ಸಂರಕ್ಷಣೆ, ಭತ್ತ ಬೇಸಾಯದಲ್ಲಿ ಯಾಂತ್ರಿಕತೆ ಎಂಬ ವಿಚಾರದ ಕುರಿತು ಗೋಷ್ಠಿಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News