ನಗರಸಭಾ ಸದಸ್ಯನ ಕಾರಿಗೆ ಹಾನಿಗೈದ ದುಷ್ಕರ್ಮಿಗಳು

Update: 2017-01-12 15:54 GMT

ಉಳ್ಳಾಲ, ಜ.12: ಉಳ್ಳಾಲ ನಗರಸಭಾ ಸದಸ್ಯರೋರ್ವರ ಕಾರನ್ನು ರಾತ್ರಿಯ ವೇಳೆಯಲ್ಲಿ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ಉಳ್ಳಾಲ ದರ್ಗಾ ಬಳಿಯ ಮೇಲಂಗಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ್ ಅವರು ಬುಧವಾರ ರಾತ್ರಿ ಎಂದಿನಂತೆ ವ್ಯವಹಾರ ಮುಗಿಸಿ ತನ್ನ ಮನೆಗೆ ಮಾರುತಿ ಸ್ವಿಪ್ಟ್ ಕಾರಲ್ಲಿ ಬಂದಿದ್ದು ಇಂಜಿನ್ನಿಂದ ತೈಲ ಸೋರಿಕೆಯಾಗುವುದರಿಂದ ಗೇಟಿನ ಹೊರಗಡೆಯ ರಸ್ತೆ ಬದಿಯಲ್ಲೇ ಕಾರನ್ನು ನಿಲುಗಡೆ ಮಾಡಿ ಮಲಗಿದ್ದರು.  ಗುರುವಾರ ಮುಂಜಾನೆ ಫಾರೂಕ್ ಎದ್ದು ನೋಡಿದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಗಾಜುಗಳನ್ನು ದುಷ್ಕರ್ಮಿಗಳು ಪುಡಿಗೈದಿದ್ದು, ಕಾರಿಗೂ ಹಾನಿಗೊಳಿಸಿದ್ದಾರೆ. ಕೂಡಲೇ  ಉಳ್ಳಾಲ ಪೊಲೀಸರಿಗೆ ಫಾರೂಕ್ ಮಾಹಿತಿ ರವಾನಿಸಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಫಾರೂಕ್ ಉಳ್ಳಾಲ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಕ್ರಮಕ್ಕೆ ಸಚಿವ ಖಾದರ್ ಸೂಚನೆ

ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ ಅವರ ಕಾರನ್ನು ಹಾನಿಗೊಳಿಸಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಎಐಸಿಸಿ ಸಭೆಗೆ ಪಾಲ್ಗೊಳ್ಳಲೆಂದು ಹೊಸ ದಿಲ್ಲಿಗೆ ತೆರಳಿರುವ ಸಚಿವರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಇರಿಸಲಾಗಿದ್ದ ಕಾರಿಗೆ ಹಾನಿಗೊಳಿಸಿರುವ ಕಿಡಿಗೇಡಿಗಳು ಕಾನೂನಿನ ಬಗ್ಗೆ ಭಯ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಶಾಂತಿ ಕದಡಲು ಕಾರಣರಾಗುವ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಜನರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News