×
Ad

ಪಿಂಚಣಿಗಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ ಜೆಪಿ ಸೇನಾನಿ ಲಾಲು ಯಾದವ್ !

Update: 2017-01-12 12:20 IST

ಪಾಟ್ನಾ, ಜ.12: ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಜೆಪಿ ಸೇನಾನಿ ಸಮ್ಮಾನ್ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಪಿ ಆಂದೋಲನದಲ್ಲಿ ಭಾಗಿಯಾಗಿದ್ದ ಖ್ಯಾತನಾಮರು ಅರ್ಜಿ ಸಲ್ಲಿಸದೆಯೇ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು ಎಂದು ಬಿಹಾರ ಸರಕಾರ 2009ರಲ್ಲೇ ಹೇಳಿದ್ದರೂ ತಮಗೆ ಪಿಂಚಣಿ ಬರದೇ ಇರುವುದರಿಂದ ಲಾಲು ಈಗ ಸ್ವತಹ ಅದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಪಿಂಚಣಿ ಸೌಲಭ್ಯಕ್ಕಾಗಿ ಒಟ್ಟು 2300 ಜನ ಅರ್ಜಿ ಸಲ್ಲಿಸಿದ್ದರೆ ಸುಮಾರು 2500 ಜನರು ಪಿಂಚಣಿ ಪಡೆಯುತ್ತಿದ್ದಾರೆ. ಜೆಪಿ ಆಂದೋಲನದ ಸಂದರ್ಭ ಆರು ತಿಂಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ಲಾಲು ಅವರಿಂದ ಅರ್ಜಿ ಬಂದಿದೆಯೆಂದು ಬಿಹಾರ ಗೃಹ ಇಲಾಖೆ ದೃಢೀಕರಿಸಿದೆ. ಈ ಯೋಜನೆಯನ್ವಯ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಆಂದೋಲನದ ಸಂದರ್ಭ ಜೈಲುವಾಸ ಅನುಭವಿಸಿದ್ದವರಿಗೆ ರೂ.5000 ಮಾಸಿಕ ಪಿಂಚಣಿ ದೊರೆಯುವುದಾದರೆ ಆರು ತಿಂಗಳುಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿದವರಿಗೆ ರೂ.10,000 ಮಾಸಿಕ ಪಿಂಚಣಿ ಸೌಲಭ್ಯವಿದೆ. ಲಾಲು ಈಗ ಅರ್ಜಿ ಸಲ್ಲಿಸಿರುವುದರಿಂದ ಅವರಿಗೆ 2009ರಿಂದ ಬರಬೇಕಾದ ಬಾಕಿ ಮೊತ್ತ ಹೊರತುಪಡಿಸಿ ತಿಂಗಳಿಗೆ ರೂ.10,000 ದೊರೆಯುವುದು.

ಲಾಲು ಅವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುವುದನ್ನುಅವರ ಸಮೀಪವರ್ತಿ ಹಾಗೂ ಶಾಸಕ ಭೊಲಾ ಯಾದವ್‌ ಕೂಡ ದೃಢೀಕರಿಸಿದ್ದಾರೆ.
ಜೆಪಿ ಆಂದೋಲನದ ಸಂದರ್ಭ ಲಾಲು ಅವರು ಪಾಟ್ನಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಯೂನಿಯನ್ ನಾಯಕರಾಗಿದ್ದರಲ್ಲದೆ ಬಿಹಾರ ಪ್ರದೇಶ್ ಸಂಘರ್ಷ್ ಸಂಚಾಲನ್ ಸಮಿತಿ ಮಾರ್ಚ್ 18, 1974ರಲ್ಲಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಆ ಆಂದೋಲನದ ನೇತೃತ್ವವನ್ನು ನಂತರ ಜಯಪ್ರಕಾಶ್ ನಾರಾಯಣ್ ವಹಿಸಿದ್ದರು.ನಂತರದ ಬೆಳವಣಿಗೆಗಳಲ್ಲಿ ಬಂಧನ ತಪ್ಪಿಸುವ ಸಲುವಾಗಿ ಪಾಟ್ನಾ, ಗೋಪಾಲ್ ಗಂಜ್, ಸೇರ್ ಕಲನ್ ಸಮೀಪದ ಮಾವನ ಮನೆ ಸಹಿತ ಹಲವೆಡೆ ತಲೆಮರೆಸಿಕೊಂಡಿದ್ದ ಲಾಲು1975ರಲ್ಲಿ ಆಂತರಿಕ ಸುರಕ್ಷಾ ನಿರ್ವಹಣಾ ಕಾಯ್ದೆಯನ್ವಯ ಬಂಧಿತರಾಗಿದ್ದರು. ಅವರನ್ನು ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಸಿದ್ಧಪಡಿಸಲಾಗಿದ್ದ ತಾತ್ಕಾಲಿಕ ಕಾರಾಗೃಹದಲ್ಲಿ ಹಾಗೂ ನಂತರ ಬುಕ್ಸಾರ್ ಜೈಲಿನಲ್ಲಿರಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News