ಮೋದಿ ಪದವಿ ನಕಲಿ ಎಂಬುದಕ್ಕೆ ಇದೇ ಪುರಾವೆಯಲ್ಲವೇ?
ಹೊಸದಿಲ್ಲಿ, ಜ.12: ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಅನುಮತಿಸುವಂತೆ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿದ್ದ ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರಿಗೆ ನೀಡಲಾದ ‘‘ಶಿಕ್ಷೆಯೇ’’ಪ್ರಧಾನಿಯ ಪದವಿ ನಕಲಿ ಎಂಬುದಕ್ಕೆ ಪುರಾವೆಯಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
‘‘ಅವರ ಡಿಗ್ರಿ ನಕಲಿಯೆಂದು ಇದರಿಂದ ಸಾಬೀತಾಗುವುದಿಲ್ಲವೇ ? ಅವರೇಕೆ ತಮ್ಮ ಪದವಿಗಳನ್ನು ಅಡಗಿಸಲು ಯತ್ನಿಸುತ್ತಿದ್ದಾರೆ?’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ವಿಶ್ವವಿದ್ಯಾಲಯಕ್ಕೆ ಮೇಲಿನಂತೆ ನಿರ್ದೇಶನ ನೀಡಿದ್ದ ಆಚಾರ್ಯುಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅರ್ಜಿಗಳಬಗ್ಗೆ ಯಾವುದೇ ಆದೇಶ ನೀಡುವ ಅಧಿಕಾರವನ್ನು ಮಂಗಳವಾರ ಸಂಜೆಯೇ ಕಳೆದುಕೊಂಡಿದ್ದಾರೆ. ಈ ಇಲಾಖೆಗೆ ಸಂಬಂಧದ ಆರ್ ಟಿ ಐ ಅರ್ಜಿಗಳನ್ನು ಇನ್ನು ಮುಂದೆ ಇನ್ನೊಬ್ಬ ಮಾಹಿತಿ ಅಧಿಕಾರಿ ಮಂಜುಳಾ ಪರಾಶರ್ ನೋಡಿಕೊಳ್ಳಲಿದ್ದಾರೆಂಬ ಆದೇಶ ಬಂದಿದೆಯೆನ್ನಲಾಗಿದೆ.
ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆ ಸಾಕಷ್ಟು ಗೌಪ್ಯವಾಗಿದ್ದು ಅವರ ಪಕ್ಷ ಈ ಹಿಂದೆ ನೀಡಿದ ಮಾಹಿತಿಯಂತೆ ಪ್ರಧಾನಿ 1978ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಬಿಎ ಪದವಿ ಪಡೆದಿದ್ದಾರೆದು ಹೇಳಲಾಗಿದ್ದರೂ ಈ ಬಗ್ಗೆ ಯಾವುದೇ ಪುರಾವೆ ಒದಗಿಸಲು ಅದು ವಿಫಲವಾಗಿದೆ.
ಜನವರಿ 8ರಂದು ಕೇಂದ್ರ ಮಾಹಿತಿ ಆಯೋಗವು ತನ್ನ ಆದೇಶದಲ್ಲಿ ಪ್ರಧಾನಿ ಪದವಿ ಪಡೆದಿದ್ದಾರೆನ್ನಲಾದ 1978ರಲ್ಲಿ ಬಿಎ ಪದವಿ ಪಡೆದ ಎಲ್ಲಾ ವಿದ್ಯಾಥಿಗಳ ದಾಖಲೆಗಳನ್ನು ಪರಿಶೀಲಿಸಲು ಅನುಮತಿಸುವಂತೆ ದಿಲ್ಲಿ ವಿವಿಗೆ ಹೇಳಿತ್ತು. ಮೂರನೆ ವ್ಯಕ್ತಿಯ ಬಗೆಗಿನ ಮಾಹಿತಿಯೊದಗಿಸುವುದರಲ್ಲಿ ಯಾವುದೇ ನ್ಯಾಯಪರತೆಯಿಲ್ಲವೆಂದು ವಿಶ್ವವಿದ್ಯಾನಿಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಾದವನ್ನು ಕೇಂದ್ರ ಮಾಹಿತಿ ಆಯೋಗ ತಿರಸ್ಕರಿಸಿತ್ತು.
ಆರ್ ಟಿಐ ಕಾರ್ಯಕರ್ತ ನೀರಜ್ ಅವರು ಈ ಸಂಬಂಧ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.