×
Ad

ಕಳಪೆ ಆಹಾರ:ಬಿಎಸ್‌ಎಫ್ ಯೋಧನ ವೀಡಿಯೊ ಕುರಿತು ಮಾಹಿತಿ ಕೇಳಿದ ಪ್ರಧಾನಿ ಕಚೇರಿ

Update: 2017-01-12 15:27 IST

ಹೊಸದಿಲ್ಲಿ,ಜ.12: ತಮಗೆ ಕಳಪೆ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿರುವ ಬಿಎಸ್‌ಎಫ್ ಕಾನ್‌ಸ್ಟೇಬಲ್ ತೇಜ್ ಬಹಾದುರ್ ಯಾದವ್ ಅವರ ಫೇಸ್ ಬುಕ್ ವೀಡಿಯೊಗಳ ಕುರಿತು ಸಷ್ಟಿಯಾಗಿರುವ ಭಾರೀ ವಿವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಚೇರಿಯ ಗಮನವನ್ನು ಸೆಳೆದಿದ್ದು, ಈ ಬಗ್ಗೆ ತನಗೆ ಮಾಹಿತಿಗಳನ್ನು ಸಲ್ಲಿಸುವಂತೆ ಅದು ಗೃಹ ಸಚಿವಾಲಯಕ್ಕೆ ಸೂಚಿಸಿದೆ.

ಬಿಎಸ್‌ಎಫ್ ಯೋಧರಿಗೆ ಅರೆಬೆಂದ ತೆಳ್ಳಗಿನ ಬೇಳೆಸಾರು ಮತ್ತು ಸುಟ್ಟು ಕರಕಲಾದ ಪರೋಟಾಗಳನ್ನು ಆಹಾರವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿ ಯಾದವ ಪೋಸ್ಟ್ ಮಾಡಿರುವ ನಾಲ್ಕು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ 30 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಪ್ರಧಾನಿ ಕಚೇರಿಯು ಈ ವೀಡಿಯೊಗಳ ಕುರಿತು ತನಿಖೆಯನ್ನು ನಡೆಸುತ್ತಿರುವ ಗೃಹ ಸಚಿವಾಲಯದಿಂದ ಮಾಹಿತಿಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ವಸ್ತುಸ್ಥಿತಿಯನ್ನು ಬಯಲುಗೊಳಿಸಿದ್ದಕ್ಕಾಗಿ ಯಾದವರನ್ನು ಮೇಲಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರ ಕುಟುಂಬವು ಆರೋಪಿಸಿದೆ. ವೀಡಿಯೊಗಳು ವೈರಲ್ ಆದ ಒಂದು ದಿನದ ಬಳಿಕ ಯಾದವರನ್ನು ಪೂಂಛ್‌ನ ನಿಯಂತ್ರಣ ರೇಖೆಯಿಂದ ರಾಜೌರಿಯಲ್ಲಿನ ಬಟಾಲಿಯನ್‌ಗೆ ವರ್ಗಾಯಿಸಲಾಗಿದೆ.

‘‘ನನ್ನ ಪತಿ ಸರಿಯಾದುದನ್ನೇ ಮಾಡಿದ್ದಾರೆ. ಅವರು ಯೋಧರ ಪರವಾಗಿ ಧ್ವನಿಯೆತ್ತಿದ್ದಾರೆ. ಒಳ್ಳೆಯ ಆಹಾರವನ್ನು ಕೇಳುವುದು ಅಪರಾಧವೇನಲ್ಲ. ಅವರು ವಸ್ತುಸ್ಥಿತಿಯನ್ನು ಬಯಲುಗೊಳಿಸಿದ್ದಾರೆ ’’ಎಂದು ಯಾದವ ಅವರ ಪತ್ನಿ ಶರ್ಮಿಳಾ ಹೇಳಿದ್ದಾರೆ.

‘‘ನನ್ನ ಪತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಅವರು(ಬಿಎಸ್‌ಎಫ್) ಹೇಳುತ್ತಿದ್ದಾರೆ. ಅವರು ನಿಜಕ್ಕೂ ಮಾನಸಿಕ ಅಸ್ವಸ್ಥರಾಗಿದ್ದರೆ ಅವರ ಕೈಯಲ್ಲಿ ಬಂದೂಕು ನೀಡಿದ್ದೇಕೆ ’’ಎಂದೂ ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News