ಖಾದಿ ಉದ್ಯೋಗದ ಕ್ಯಾಲೆಂಡರ್ ನಲ್ಲಿ ಗಾಂಧೀಜಿ ಜಾಗದಲ್ಲಿ ಪ್ರತಿಷ್ಠಾಪನೆಯಾದ ಮೋದೀಜಿ !

Update: 2017-01-12 16:34 GMT

ಮುಂಬೈ,ಜ.12: ಅಚ್ಚರಿದಾಯಕ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಾದಿ ಗ್ರಾಮೋದ್ಯೋಗ ಆಯೋಗ(ಕೆವಿಐಸಿ)ದ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಟೇಬಲ್ ಡೈರಿಗಳಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ‘ಗೇಟ್ ಪಾಸ್’ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಇಂದಿಲ್ಲಿ ತಿಳಿಸಿದವು.

ಗಾಂಧೀಜಿಯವರು ಕುಳಿತುಕೊಳ್ಳುತ್ತಿದ್ದ ಶಾಸ್ತ್ರೀಯ ಭಂಗಿಯಲ್ಲಿಯೇ ಮೋದಿಯವರು ಬೃಹತ್ ಚರಕಾದಲ್ಲಿ ಖಾದಿ ನೂಲನ್ನು ತೆಗೆಯುತ್ತಿರುವುದನ್ನು ಕ್ಯಾಲೆಂಡರ್ ಮತ್ತು ಡೈರಿಯ ಮುಖಚಿತ್ರದಲ್ಲಿ ತೋರಿಸಿರುವುದನ್ನು ಕಂಡು ಆಯೋಗದ ಹೆಚ್ಚಿನ ಸಿಬ್ಬಂದಿಗಳು ಮತ್ತು ಅಧಿಕಾರಗಳು ದಿಗ್ಭ್ರಾಂತರಾಗಿದ್ದಾರೆ.

ಗಾಂಧೀಜಿಯವರು ತನ್ನ ‘ಟ್ರೇಡ್ ಮಾರ್ಕ್ ’ ಆಗಿದ್ದ ತುಂಡು ಪಂಚೆಯಲ್ಲಿ ಸಾದಾ ಚರಕಾದ ಎದುರು ಕುಳಿತುಕೊಂಡು ಖಾದಿ ನೂಲನ್ನು ತಯಾರಿಸುವ ಐತಿಹಾಸಿಕ ಚಿತ್ರ ತಲೆಮಾರುಗಳಿಂದಲೂ ಜನರ ಮನಸ್ಸುಗಳಲ್ಲಿ ಅಚ್ಚೊತ್ತಿದ್ದರೆ, ಮೋದಿಯವರು ಸ್ವಲ್ಪ ಆಧುನಿಕವಾದ ಚರಕಾದೆದುರು ಕುರ್ತಾ-ಪೈಜಾಮಾ-ಜಾಕೆಟ್ ಧರಿಸಿಕೊಂಡು ನೂಲನ್ನು ತೆಗೆಯುತ್ತಿರುವ ಚಿತ್ರ ಹೊಸ ಕ್ಯಾಲೆಂಡರ್ ಮತ್ತು ಡೈರಿಯ ಮೇಲೆ ರಾರಾಜಿಸುತ್ತಿದೆ.

ಗಾಂಧೀಜಿಯ ಜಾಗದಲ್ಲಿ ಮೋದಿಯವರನ್ನು ಕಂಡು ಮಾತೇ ಹೊರಡದಂತಾಗಿರುವ ಇಲ್ಲಿಯ ವಿಲೆ ಪಾರ್ಲದಲ್ಲಿರುವ ಕೆವಿಐಸಿಯ ಕೇಂದ್ರಕಚೇರಿಯ ಉದ್ಯೋಗಿಗಳು ಇಂದು ಭೋಜನ ವಿರಾಮದ ಅವಧಿಯಲ್ಲಿ ತಮ್ಮ ಬಾಯಿಗಳಿಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡು ‘ವೌನ,ಆತ್ಮಶುದ್ಧಿಯ ’ಪ್ರತಿಭಟನೆಯನ್ನು ನಡೆಸಿದರು.

ಇದೇನೂ ಹೊಸ ವಿಷಯವಲ್ಲ,ಈ ಹಿಂದೆಯೂ ಆಯೋಗವು ಬೇರೆ ಮಾದರಿಯ ಕ್ಯಾಲೆಂಡರ್ ಮತ್ತು ಡೈರಿಗಳನ್ನು ಹೊರತಂದಿದೆ ಎಂದು ಕೆವಿಐಸಿ ಅಧ್ಯಕ್ಷ ವಿನಯ ಕುಮಾರ್ ಈ ಬಗ್ಗೆ ತನ್ನನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ಉತ್ತರಿಸಿದರು.

ಇಡೀ ಖಾದಿ ಉದ್ಯೋಗವು ಗಾಂಧಿಯರ ಜೀವನಕ್ರಮ,ಅವರ ಚಿಂತನೆಗಳು ಮತ್ತು ಆದರ್ಶಗಳನ್ನು ಆಧರಿಸಿದೆ. ಅವರು ಕೆವಿಐಸಿಯ ಆತ್ಮವಾಗಿದ್ದಾರೆ. ಹೀಗಾಗಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸಮಜಾಯಿಷಿ ನಿಡಿದರು.

ಮೋದಿಯವರು ಬಹಳ ಹಿಂದಿನಿಂದಲೂ ಖಾದಿಯನ್ನು ಧರಿಸುತ್ತಿದ್ದಾರೆ. ಖಾದಿಯಲ್ಲಿ ತನ್ನದೇ ಶೈಲಿಗಳನ್ನು ಹೊಂದುವ ಮೂಲಕ ಜನರಲ್ಲಿ ಮತ್ತು ವಿದೇಶಿ ಗಣ್ಯರಲ್ಲಿಯೂ ಅದನ್ನು ಜನಪ್ರಿಯಗೊಳಿಸಿದ್ದಾರೆ. ನಿಜ ಹೇಳಬೇಕೆಂದರೆ ಅವರು ಖಾದಿಯ ಅತ್ಯಂತ ಉನ್ನತ ಬ್ರಾಂಡ್ ರಾಯಭಾರಿಯಾಗಿದ್ದಾರೆ. ಅವರ ಮತ್ತು ಕೆವಿಐಸಿಯ ದೂರದೃಷ್ಟಿ ಗಳು ಒಂದೇ ಆಗಿವೆ. ಜೊತೆಗೆ ಮೋದಿಯವರು ಯುವಜನತೆಯ ಆದರ್ಶವಾಗಿದ್ದಾರೆ ಎಂದರು.

ಮಹಾತ್ಮಾಜಿಯವರ ಚಿಂತನೆಗಳು,ಸಿದ್ಧಾಂತ ಮತ್ತು ಆದರ್ಶಗಳನ್ನು ಸರಕಾರವು ವ್ಯವಸ್ಥಿತವಾಗಿ ಹೊರಹಾಕುತ್ತಿರುವುದು ನಮಗೆ ನೋವನ್ನುಂಟು ಮಾಡಿದೆ. ಕಳೆದ ವರ್ಷ ಕ್ಯಾಲೆಂಡರ್‌ನಲ್ಲಿ ಪ್ರಧಾನಿಯವರ ಪೋಟೊಗಳನ್ನು ಸೇರಿಸುವ ಮೂಲಕ ಇದಕ್ಕಾಗಿ ಮೊದಲ ಪ್ರಯತ್ನ ನಡೆದಿತ್ತು ಎಂದು ಹಿರಿಯ ಕೆವಿಐಸಿ ಉದ್ಯೋಗಿಯೋರ್ವರು ಬೇಸರ ವ್ಯಕ್ತಪಡಿಸಿದರು. ತನ್ನ ವಿರುದ್ಧ ಪ್ರತೀಕಾರ ಕ್ರಮ ನಡೆಯಬಹುದೆಂಬ ಭೀತಿಯಲ್ಲಿದ್ದ ಅವರು ತನ್ನ ಹೆಸರನ್ನು ಬಹಿರಂಗಗೊಳಿಸದಿರಲು ಸುದ್ದಿಗಾರರನ್ನು ಕೋರಿಕೊಂಡರು.

ವಾಸ್ತವದಲ್ಲಿ ಕೆವಿಐಸಿ ಉದ್ಯೋಗಿಗಳು ಕಳೆದ ವರ್ಷವೇ ಕ್ಯಾಲೆಂಡರ್ ವಿಷಯದಲ್ಲಿ ಆಡಳಿತಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದ್ದರು. ಭವಿಷ್ಯದಲ್ಲಿ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಆಗ ಅವರಿಗೆ ಭರವಸೆ ನೀಡಲಾಗಿತ್ತು.

ಆದರೆ ಈ ವರ್ಷ ಈ ಭರವಸೆಯನ್ನು ಸಾರಾಸಗಟಾಗಿ ಗಾಳಿಗೆ ತೂರಲಾಗಿದೆ. ಬಡಜನರಿಗಾಗಿ ಖಾದಿಯನ್ನು ಸೃಷ್ಟಿಸಿ, ಅದನ್ನು ಸ್ಯಾತಂತ್ರ ಹೋರಾಟದ ಸಂದರ್ಭದಲ್ಲಿ ಸ್ವಾವಲಂಬನೆಯ ಪ್ರತೀಕವನ್ನಾಗಿ ಮಾಡಿದ್ದ ಗಾಂಧೀಜಿಯವರ ಚಿತ್ರಗಳು ಮತ್ತು ಬೋಧನೆಗಳನ್ನು ಈ ವರ್ಷದ ಕ್ಯಾಲೆಂಡರ್ ಮತ್ತು ಡೈರಿಗಳಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಅವರು ವಿಷಾದಿಸಿದರು.

ಗಮನಾರ್ಹವೆಂದರೆ ಮೋದಿ ಈಗಾಗಲೇ ಅನಧಿಕೃತವಾಗಿ ತನ್ನ ಹೆಸರಿಡಲಾಗಿರುವ ಖಾದಿ ಉಡುಪನ್ನು ಹೊಂದಿದ್ದಾರೆ. ಅರ್ಧ ತೋಳಿನ ’ಮೋದಿ ಕುರ್ತಾ ’ವನ್ನು ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಧರಿಸುತ್ತಿದ್ದಾರೆ. ವಿವಿಧ ಬಣ್ಣಗಳಲ್ಲಿ ಮತ್ತು ಶೈಲಿಗಳಲ್ಲಿ ಅದನ್ನು ಧರಿಸಿಕೊಂಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಗಾಂಧೀಜಿಯವರ ಜನ್ಮದಿನವಾದ ಅ.2ರಿಂದ ಅವರು ಹುತಾತ್ಮರಾದ ಜ.30ರವರೆಗೆ ನಾಲ್ಕು ತಿಂಗಳುಗಳ ಅವಧಿಯಲ್ಲಿ ಕೆವಿಐಸಿಯು ದೇಶಾದ್ಯಂತ ಖಾದಿಯ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News