ಲಂಡನ್ ರೆಸ್ಟೋರೆಂಟ್‌ನಲ್ಲಿ ಹಿಜಾಬ್‌ಧಾರಿಣಿ ಮೇಲೆ ಹಲ್ಲೆ
Update: 2017-01-12 21:35 IST
ಲಂಡನ್, ಜ. 12: ಲಂಡನ್‌ನ ರೆಸ್ಟೋರೆಂಟೊಂದರಲ್ಲಿ ತಿಂಡಿ ತಿನ್ನುತ್ತಿದ್ದ ಹಿಜಾಬ್‌ಧಾರಿ ಬ್ರಿಟಿಶ್ ಮಹಿಳೆಯೊಬ್ಬರ ಮೇಲೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಆಕ್ರಮಣ ನಡೆಸಿದ ಘಟನೆ ವರದಿಯಾಗಿದೆ. ಮಹಿಳೆಯ ಶಿರವಸ್ತ್ರವನ್ನು ಹರಿಯಲು ಯತ್ನಿಸಿದ ದುಷ್ಕರ್ಮಿಯು, ‘‘ನೀವು ಜನರನ್ನು ಕೊಲ್ಲುತ್ತಿದ್ದೀರಿ’’ ಎಂಬುದಾಗಿ ಆಕೆಯನ್ನು ಉದ್ದೇಶಿಸಿ ಹೇಳಿದನು.
ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್ ಟೌನ್ ಹಾಲ್‌ಗೆ ಸಮೀಪದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಕಳೆದ ವಾರ ಘಟನೆ ನಡೆದಿದೆ.ಘಟನೆಯನ್ನು ಖಂಡಿಸಿ ಜನಾಂಗೀಯತೆ ವಿರೋಧಿ ಅಭಿಯಾನದ ಸದಸ್ಯರು ಪ್ರತಿಭಟನೆ ನಡೆಸಿದರು.
ಊಟ ಮಾಡುತ್ತಿದ್ದ ಮಹಿಳೆಯ ಬಳಿಗೆ ಬಂದ ವ್ಯಕ್ತಿಯು, ‘‘ನೀನು ಇಲ್ಲಿರಬಾರದು’’ ಎಂದು ಹೇಳಿದನು. ಬಳಿಕ, ಆಕೆಯ ಹಿಜಾಬನ್ನು ಹಿಡಿದು ಎಳೆದನು.
ಆಕೆಯ ಕೋಟು ಹಿಡಿದು ಹೊರಗೆ ಎಳೆದುಕೊಂಡು ಹೋಗಲು ಯತ್ನಿಸಿದಾಗ, ಆಕೆಯ ಸ್ನೇಹಿತರು ಮತ್ತು ಇತರರು ಧಾವಿಸಿ ಬಂದು ಆಕೆಯನ್ನು ರಕ್ಷಿಸಿದರು ಎಂದು ‘ದ ಸನ್’ ವರದಿ ಮಾಡಿದೆ.