ಸಾನಿಯಾ-ಸ್ಟ್ರೈಕೋವಾ ಫೈನಲ್‌ಗೆ ಲಗ್ಗೆ
ಸಿಡ್ನಿ, ಜ.12: ಝೆಕ್ ಜೊತೆಗಾರ್ತಿ ಬಾರ್ಬೊರಾ ಸ್ಟ್ರೈಕೋವಾರೊಂದಿಗೆ ಡಬ್ಲುಟಿಎ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಈ ವರ್ಷ ಸತತ ಎರಡನೆ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.
ಅಗ್ರ ಶ್ರೇಯಾಂಕದ ಜೋಡಿ ಸಾನಿಯಾ-ಸ್ಟ್ರೈಕೋವಾ ಗುರುವಾರ ಇಲ್ಲಿ ಕೇವಲ 51 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್ ಸೆಮಿ ಫೈನಲ್‌ನಲ್ಲಿ ಅಮೆರಿಕದ ವಾನಿಯಾ ಕಿಂಗ್ ಹಾಗೂ ಕಝಕ್‌ಸ್ತಾನದ ಯರೊಸ್ಲಾವಾ ಶ್ವೆಡೊವಾರನ್ನು 6-1, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಸಾನಿಯಾ-ಸ್ಟ್ರೈಕೋವಾ ಸೆಮಿಫೈನಲ್‌ನಲ್ಲಿ ಎಲ್ಲ 5 ಬ್ರೇಕ್‌ಪಾಯಿಂಟ್ ಉಳಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ ಟೈಮಿಯಾ ಬಾಬೊಸ್ ಹಾಗೂ ಅನಸ್ಟೇಸಿಯ ಪಾವ್ಲಚೆಂಕೊವಾರನ್ನು ಎದುರಿಸಲಿದ್ದಾರೆ. ಈ ಜೋಡಿ ಮತ್ತೊಂದು ಸೆಮಿ ಫೈನಲ್‌ನಲ್ಲಿ ಆ್ಯಂಡ್ರಿಯ ಕ್ಲೆಪಾಕ್ ಹಾಗೂ ಮರಿಯಾ ಜೋಸ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿತ್ತು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಮಾರ್ಟಿನಾ ಹಿಂಗಿಸ್‌ರಿಂದ ಬೇರ್ಪಟ್ಟ ಬಳಿಕ ಸಾನಿಯಾ ಕಳೆದ 8 ಟೂರ್ನಿಗಳಲ್ಲಿ ಆರನೆ ಬಾರಿ ಫೈನಲ್‌ಗೆ ತಲುಪಿದ್ದಾರೆ.
ಸಾನಿಯಾ ಅವರು ಸ್ಟ್ರೈಕೊವಾರೊಂದಿಗೆ ಸಿನ್ಸಿನಾಟಿ ಹಾಗೂ ಟೋಕಿಯೋ ಓಪನ್ ಜಯಿಸಿದ್ದರು. ಯುಎಸ್ ಓಪನ್ ಹಾಗೂ ಬೀಜಿಂಗ್ ಟೂರ್ನಿಯಲ್ಲಿ ಬೇಗನೆ ಹೊರ ನಡೆದಿದ್ದರು.
ಕಳೆದ ವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಸಾನಿಯಾ ಅವರು ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೊತೆಗೂಡಿ ವರ್ಷದ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆದರೆ, ವಿಶ್ವದ ನಂ.1 ಸ್ಥಾನವನ್ನು ಅಮೆರಿಕದ ಬೆಥಾನಿಗೆ ಬಿಟ್ಟುಕೊಟ್ಟಿದ್ದರು.