ಫಿಫಾ ರ್ಯಾಂಕಿಂಗ್: 10 ವರ್ಷದಲ್ಲಿ ಭಾರತ ಶ್ರೇಷ್ಠ ಸಾಧನೆ
ಝೂರಿಕ್, ಜ.12: ಭಾರತ ಫಿಫಾ ರ್ಯಾಂಕಿಂಗ್‌ನಲ್ಲಿ ಆರು ಸ್ಥಾನ ಮೇಲಕ್ಕೇರಿ 129ನೆ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಒಂದು ದಶಕದ ಬಳಿಕ ಶ್ರೇಷ್ಠ ಸಾಧನೆ ಮಾಡಿದೆ ಎಂದು ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಪಾ ಗುರುವಾರ ತಿಳಿಸಿದೆ.
ಭಾರತ 2005ರ ಬಳಿಕ ಫಿಫಾ ರ್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದೆ. 2005ರ ಡಿಸೆಂಬರ್‌ನಲ್ಲಿ 127ನೆ ಸ್ಥಾನ ತಲುಪಿತ್ತು. 2015ರ ಮಾರ್ಚ್‌ನಲ್ಲಿ 173ನೆ ಸ್ಥಾನದಲ್ಲಿದ್ದ ಭಾರತ ಎರಡು ವರ್ಷಗಳಲ್ಲಿ 42 ಸ್ಥಾನ ಭಡ್ತಿ ಪಡೆದಿದೆ.
ಭಾರತ ಕಳೆದ 11 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿದೆ. ಕಳೆದ ವರ್ಷ 114ನೆ ರ್ಯಾಂಕಿನ ಪುರ್ಟೊ ರಿಕೊ ವಿರುದ್ಧ 4-1 ಗೋಲುಗಳ ಅಂತರದಿಂದ ಮಣಿಸಿರುವುದು ಭಾರತದ ಮಹತ್ವದ ಸಾಧನೆಯಾಗಿತ್ತು.
ಫಿಫಾ ರ್ಯಾಂಕಿಂಗ್‌ನ ಅಗ್ರ 34 ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅರ್ಜೆಂಟೀನ, ಬ್ರೆಝಿಲ್ ಹಾಗೂ ಜರ್ಮನಿ ತಂಡಗಳು ಕ್ರಮವಾಗಿ 1ನೆ,2ನೆ ಹಾಗೂ 3ನೆ ಸ್ಥಾನ ಪಡೆದಿದೆ. ನಮ್ಮ ತಂಡ 2005ರ ಬಳಿಕ ಶ್ರೇಷ್ಠ ರ್ಯಾಂಕಿಂಗ್ ಪಡೆದಿದ್ದು,ಇದು ತಂಡದ ಸಾಧನೆಯ ದ್ಯೋತಕವಾಗಿದೆ.
ಈ ರ್ಯಾಂಕಿಂಗ್‌ನಿಂದಾಗಿ ಈ ತಿಂಗಳಾಂತ್ಯದಲ್ಲಿ ನಡೆಯುವ 2019ರ ಏಷ್ಯಾ ಕಪ್ ಕ್ವಾಲಿಫೈಯರ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. 2011ರಲ್ಲಿ ಕೊನೆಯ ಬಾರಿ ಏಷ್ಯಾಕಪ್‌ನಲ್ಲಿ ಆಡಿದ್ದೆವು.2019ರಲ್ಲಿ ಯುಎಇನಲ್ಲಿ ಮತ್ತೊಮ್ಮೆ ಆಡುವ ವಿಶ್ವಾಸದಲ್ಲಿದ್ದೇವೆ ಎಂದು ಎಐಎಫ್‌ಎಫ್ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.