×
Ad

ಬ್ಯಾಂಕ್‌ಗಳು, ತೈಲ ಕಂಪೆನಿಗಳಿಗೆ ವಹಿವಾಟು ಶುಲ್ಕದ ಹೊರೆ: ಧರ್ಮೇಂದ್ರ ಪ್ರಧಾನ್

Update: 2017-01-12 23:58 IST

  ಹೊಸದಿಲ್ಲಿ, ಜ.12: ಪೆಟ್ರೋಲ್ ಪಂಪ್‌ಗಳಲ್ಲಿ ಕಾರ್ಡ್‌ಗಳನ್ನು ಬಳಸಿ ತೈಲ ಖರೀದಿಸುವ ಸಂದರ್ಭ ವಿಧಿಸಲಾಗುವ ವಹಿವಾಟು ಶುಲ್ಕವನ್ನು ಗ್ರಾಹಕರ ಅಥವಾ ಪೆಟ್ರೋಲ್ ಪಂಪ್‌ಗಳ ಮೇಲೆ ವಿಧಿಸುವಂತಿಲ್ಲ. ಬ್ಯಾಂಕ್‌ಗಳು ಮತ್ತು ತೈಲ ಮಾರಾಟ ಕಂಪೆನಿಗಳು ಈ ಶುಲ್ಕದ ಹೊರೆ ಹೊರಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಇಂದಿಲ್ಲಿ ತಿಳಿಸಿದ್ದಾರೆ. ನಿರ್ಧಾರ ಸ್ಪಷ್ಟವಾಗಿದೆ. ಗ್ರಾಹಕರು ಅಥವಾ ಚಿಲ್ಲರೆ ವ್ಯಾಪಾರಿಗಳ ಮೇಲೆ ‘ಮರ್ಚಂಟ್ ಡಿಸ್ಕೌಂಟ್ ರೇಟ್’(ಎಂಡಿಆರ್) ಹೊರೆ ಬೀಳುವಂತಿಲ್ಲ. ಬ್ಯಾಂಕ್‌ಗಳು ಮತ್ತು ತೈಲ ಮಾರಾಟ ಸಂಸ್ಥೆಗಳು ಈ ಶುಲ್ಕವನ್ನು ಪಾವತಿಸುವ ಬಗ್ಗೆ ತಮ್ಮೆಳಗೆ ಒಂದು ಸಹಮತಕ್ಕೆ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ವಹಿವಾಟು ಶುಲ್ಕದ ವಿಷಯದ ಬಗ್ಗೆ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರ ವಿಭಾಗ ದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ವ್ಯವಹಾರಕ್ಕೆ ಬ್ಯಾಂಕ್‌ಗಳು ವ್ಯಾಪಾರಿಗಳ ಮೇಲೆ ಎಂಡಿಆರ್ ಶುಲ್ಕವನ್ನು ವಿಧಿಸುತ್ತವೆ ಮತ್ತು ಈ ಶುಲ್ಕವನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತಿತ್ತು. ಆದರೆ ನೋಟು ಅಮಾನ್ಯಗೊಳಿಸಿದ ಬಳಿಕ ಡಿಜಿಟಲ್ ಪಾವತಿ ಪ್ರಕ್ರಿಯೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ , ಕಾರ್ಡ್ ಬಳಸುವ ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿತ್ತು. ಈ ಕಾರಣ ಬ್ಯಾಂಕ್‌ಗಳು ವಹಿವಾಟು ಶುಲ್ಕದ ಹೊರೆಯನ್ನು ಪೆಟ್ರೋಲ್ ಪಂಪ್‌ಗಳ ಮೇಲೆ ವಿಧಿಸಿತ್ತು. ಇದನ್ನು ವಿರೋಧಿಸಿ ಪೆಟ್ರೋಲ್ ಪಂಪ್‌ಗಳು ಕಾರ್ಡ್ ಪಾವತಿ ಪ್ರಕ್ರಿಯೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News