ಗಡಿ ದಾಟಿದ ಯೋಧ ಚಂದು ಚವಾಣ್ ಬಿಡುಗಡೆಗೆ ಪಾಕ್ ಸಮ್ಮತಿ: ಭಾಮ್ರೆ
ಮುಂಬೈ, ಜ.12: ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ಪಡೆಗಳಿಗೆ ಸೆರೆಸಿಕ್ಕಿರುವ ಭಾರತದ ಯೋಧ ಚಂದು ಚವಾಣ್ ಬಿಡುಗಡೆಗೆ ಪಾಕಿಸ್ತಾನದ ಸೇನಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ರಕ್ಷಣಾ ಇಲಾಖೆಯ ಸಹಾಯಕ ಸಚಿವ ಸುಭಾಷ್ ಭಾಮ್ರೆ ಹೇಳಿದ್ದಾರೆ.
ಚಂದು ಚವಾಣ್ ಬದುಕಿದ್ದಾರೆ ಮತ್ತು ಅವರ ವಿಚಾರಣೆ ಮುಗಿದಾಕ್ಷಣ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ಸೇನಾಪಡೆ ತಿಳಿಸಿದೆ ಎಂದು ದಕ್ಷಿಣ ಮುಂಬೈಯ ಮಝಗಾಂವ್ ಬಂದರಿನಲ್ಲಿ ‘ಖಂಡೇರಿ’ ಸಬ್‌ಮೆರೀನ್‌ಗೆ ಚಾಲನೆ ನೀಡಿದ ಭಾಮ್ರೆ ತಿಳಿಸಿದರು. ಯೋಧನ ಬಿಡುಗಡೆಗೆ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪಾಕ್ ಸೇನಾಧಿಕಾರಿಗಳೊಂದಿಗೆ ಇದುವರೆಗೆ ಸುಮಾರು 20 ಬಾರಿ ವಿಷಯದ ಬಗ್ಗೆ ಪ್ರಸ್ತಾಪ ನಡೆಸಲಾಗಿದೆ. ಎರಡು ದಿನದ ಹಿಂದೆ ನಡೆಸಲಾದ ಮಾತುಕತೆ ವೇಳೆ, ಯೋಧನ ವಿಚಾರಣೆ ಅಂತಿಮ ಹಂತದಲ್ಲಿದ್ದು ಶೀಘ್ರ ಆತನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಭಾಮ್ರೆ ಹೇಳಿದರು. ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಬಿಎಸ್‌ಎಫ್ ಯೋಧನ ದೂರಿನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಭಾಮ್ರೆ ತಿಳಿಸಿದರು. ಯೋಧ ತನ್ನ ಹೇಳಿಕೆಯ ಜೊತೆ ನೀಡಿರುವ ವೀಡಿಯೊ ದೃಶ್ಯಾವಳಿಯಲ್ಲಿ ತೋರಿಸಲಾದ ದಾಲ್ ಡಬ್ಬದಲ್ಲಿ ನೀಡಲಾಗುವ ಖಾದ್ಯವಾಗಿದೆ ಮತ್ತು ಪರೋಟವನ್ನು ಸೇನೆಯ ಮೆಸ್‌ನಲ್ಲಿ ಕ್ರಮಬದ್ಧವಾಗಿ ತಯಾರಿಸಲಾಗಿದೆ ಎಂದು ಬುಧವಾರ ಕೇಂದ್ರ ಗೃಹ ಇಲಾಖೆಗೆ ಬಿಎಸ್‌ಎಫ್ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಎಸ್‌ಎಫ್ ಮಹಾನಿರ್ದೇಶಕ ಕೆ.ಕೆ.ಶರ್ಮ ಅವರು ಸ್ವತಃ ಈ ಮಧ್ಯಾಂತರ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಬಿಎಸ್‌ಎಫ್‌ನ ಪಶ್ಚಿಮ ಪಡೆಯ ಕಮಾಂಡರ್ ಅವರು ಖಾದ್ಯ ತಜ್ಞರೊಂದಿಗೆ ಜಮ್ಮು ಕಾಶ್ಮೀರದ ಗಡಿಭಾಗದ ಸೇನಾ ಕೇಂದ್ರಕ್ಕೆ ಭೇಟಿ ನೀಡಿದ್ದು, ಅಲ್ಲಿ ಯೋಧ ತೇಜ್ ಬಹಾದ್ದೂರ್ ಯಾದವ್ ಮಾಡಿರುವ ಆರೋಪದ ಬಗ್ಗೆ ವಿವರವಾದ ತನಿಖೆ ನಡೆಸಲಿದ್ದಾರೆ ಎಂದು ಶರ್ಮ ಈ ಸಂದರ್ಭ ತಿಳಿಸಿದ್ದಾರೆ. .