×
Ad

ಉಪಾಧ್ಯಕ್ಷ ಬಿಡೆನ್‌ಗೆ ಜೀವಮಾನದ ಅಚ್ಚರಿ ನೀಡಿದ ಒಬಾಮಾ

Update: 2017-01-13 09:25 IST

ವಾಷಿಂಗ್ಟನ್, ಜ.13: ಅಮೆರಿಕದ ಉಪಾಧ್ಯಕ್ಷ ಜೋಯೆ ಬಿಡೆನ್‌ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುವ ಮೂಲಕ ಅಧ್ಯಕ್ಷ ಬರಾಕ್ ಒಬಾಮಾ ಜೀವಮಾನದ ಅಚ್ಚರಿ ನೀಡಿದ್ದಾರೆ.

ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 74 ವರ್ಷದಿಂದ ನೀಡುತ್ತಾ ಬಂದಿರುವ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿಯನ್ನು ಒಬಾಮಾ ಘೋಷಿಸಿದಾಗ, ಉಪಾಧ್ಯಕ್ಷ ಬೆಡೆನ್ ಆನಂದಬಾಷ್ಪ ಸುರಿಸಿದರು.

 ಮುಂದಿನ ವಾರ ಶ್ವೇತಭವನದಿಂದ ಹೊರಡುವ ಮುನ್ನ ಕುಟುಂಬ, ಸ್ನೇಹಿತರು ಹಾಗೂ ಸಿಬ್ಬಂದಿಗೆ ಬೀಳ್ಕೊಡುಗೆ ನೀಡಲಾಯಿತು. ಸಮಾರಂಭದಲ್ಲಿ ಬೆಡೆನ್ ಅವರನ್ನು ಅಮೆರಿಕದ ಅತ್ಯುತ್ತಮ ಉಪಾಧ್ಯಕ್ಷ ಹಾಗೂ ಅಮೆರಿಕದ ಸಿಂಹ ಎಂದು ಒಬಾಮಾ ಬಣ್ಣಿಸಿದರು,

"ಜೋಯ್, ಸಹ ಅಮೆರಿಕನ್ನರ ಬಗ್ಗೆ ನಿಮಗೆ ಇರುವ ನಂಬಿಕೆ ಹಾಗೂ ದೇಶದ ಮೇಲೆ ಇರುವ ಪ್ರೀತಿ ಹಾಗೂ ಜೀವಮಾನದ ಸೇವೆ ತಲೆಮಾರುಗಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಮಿಲಿಟರಿ ಸಹೋದ್ಯೋಗಿಗಳು ಕೂಡಾ ವೇದಿಕೆಗೆ ಆಗಮಿಸುವಂತೆ ನಾನು ಕೋರುತ್ತೇನೆ. ಅಧ್ಯಕ್ಷನಾಗಿ ಕೊನೆಯ ಅವಧಿಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇನೆ" ಎಂದು ಭಾವುಕರಾಗಿ ಒಬಾಮಾ ನುಡಿದರು.

ಆನಂದಬಾಷ್ಪ ಸುರಿಯುತ್ತಿದ್ದ ಕಣ್ಣುಗಳನ್ನು ಒರೆಸಿಕೊಂಡ ಬೆಡೆನ್ ಕೂಡಾ ಭಾವಪರವಶರಾದರು. "ಅಧ್ಯಕ್ಷರೇ ನಿಮ್ಮ ಋಣ ತೀರಿಸಲಾಗದ್ದು. ನಿಮ್ಮ ಹಾಗೂ ಕುಟುಂಬದ ಸ್ನೇಹಕ್ಕೆ ನಾನು ಚಿರಋಣಿ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News