×
Ad

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಲು ಬಿಎಸ್ಪಿ ಸಿದ್ಧತೆ

Update: 2017-01-13 12:09 IST

 ಲಕ್ನೋ, ಜ.13: ನನ್ನ ಪ್ರಮುಖ ಮತದಾರರು ಜಾಲತಾಣಗಳಲ್ಲಿ ಸಿಗುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಅವರು ಮಾರ್ಚ್-ಎಪ್ರಿಲ್‌ನಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಮೊರೆಹೋಗಲು ನಿರ್ಧರಿಸಿದ್ದಾರೆ.

ಪ್ರತಿಪಕ್ಷಗಳಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಬಿಜೆಪಿಗೆ ಸ್ಪರ್ಧೆಯೊಡ್ಡಲು ಮಾಯಾವತಿಯವರ ಹುಟ್ಟುಹಬ್ಬದಂದು(ಜ.15) ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಸಾಮಾಜಿಕ ಜಾಲತಾಣಗಳಲ್ಲಿ ವಿಧ್ಯುಕ್ತವಾಗಿ ಪ್ರವೇಶಿಸಲು ನಿರ್ಧರಿಸಿದೆ.

ಬೆಹನ್‌ಜಿ ಕೋ ಆನೆ ದೋ(ಮಯಾವತಿಯವರನ್ನು ಮತ್ತೆ ಅಧಿಕಾರಕ್ಕೆ ತನ್ನಿ) ಎಂಬ ಅಡಿಬರಹದಲ್ಲಿ ಟ್ವಿಟರ್, ಫೇಸ್‌ಬುಕ್ ಹಾಗೂ ಇತರ ಅಂತರ್ಜಾಲಗಳಲ್ಲಿ ವಿಡಿಯೋ ಹಾಗೂ ಪೋಸ್ಟರ್‌ಗಳನ್ನು ಹಾಕಲು ಬಿಎಸ್ಪಿ ಯೋಜನೆ ಹಾಕಿಕೊಂಡಿದೆ.

ಮಾಯಾವತಿ ಅವರು ಮುಂಬರುವ ದಿನಗಳಲ್ಲಿ 50ಕ್ಕೂ ಅಧಿಕ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ.

ಫೇಸ್‌ಬುಕ್, ಟ್ವಿಟರ್, ವ್ಯಾಟ್ಸ್‌ಆ್ಯಪ್ ಹಾಗೂ ಯೂ ಟ್ಯೂಬ್ ಅಭಿಯಾನ 60ರ ಪ್ರಾಯದ ಮಾಯಾವತಿಯವರಿಗೆ ತೀರಾ ಹೊಸತು. ಅವರು ಯಾವಾಗಲೂ ತನ್ನ ಬೆಂಬಲಿಗರನ್ನು ಸಾಂಪ್ರದಾಯಿಕವಾಗಿಯೇ ಭೇಟಿಯಾಗಲು ಒತ್ತು ನೀಡುತ್ತಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

 ಆನೆಯ ಚಿಹ್ನೆ ಅಡಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಎಸ್ಪಿ ಪಕ್ಷ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಸಕ್ರಿಯವಾಗಿದೆ. ಆದರೆ, ಹೆಚ್ಚು ಪ್ರಸಿದ್ದಿಯಲ್ಲಿಲ್ಲ. ಟ್ವಿಟರ್‌ನಲ್ಲಿ ಕೇವಲ 10,000 ಹಿಂಬಾಲಕರಿದ್ದಾರೆ. ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್(3.1 ಮಿಲಿಯನ್) ಅತ್ಯಂತ ಹೆಚ್ಚು ಫಾಲೋವರ್ಸ್‌ನ್ನು ಹೊಂದಿದ್ದಾರೆ.

ಬಿಎಸ್ಪಿ ಲಕ್ನೋದಲ್ಲಿರುವ ಕಚೇರಿಯನ್ನು ಚುನಾವಣೆ ಸಮರಕ್ಕೆ ಸಂಪೂರ್ಣ ಸಜ್ಜುಗೊಳಿಸಿದ್ದು, ಕಚೇರಿಯಲ್ಲಿ ಕಾಲ್ ಸೆಂಟರ್‌ಗಳು, ಸೋಶಿಯಲ್ ಮೀಡಿಯಾ ರೂಮ್‌ಗಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News