ವಾಹನ ಬಳಕೆ ನೀತಿ- ಶೀಘ್ರ ಕರಡು ಪ್ರತಿ : ನಿತಿನ್ ಗಡ್ಕರಿ
ಚೆನ್ನೈ, ಜ.13: ಪರಿಸರ ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ 15 ವರ್ಷ ಹಿಂದಿನ ವಾಹನಗಳನ್ನು ಗುಜರಿಗೆ ಹಾಕುವ ಉದ್ದೇಶಿತ ‘ವಾಹನ ಬಳಕೆ ನೀತಿಯ’ ಕರಡು ಪ್ರತಿಯನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಹಾಗೂ ನೌಕಾಯಾನ ಇಲಾಖೆಯ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
15 ವರ್ಷಕ್ಕೂ ಹಿಂದಿನ ವಾಹನಗಳು ಹೊರಸೂಸುವ ಹೊಗೆಯು ಶೇ.65ರಷ್ಟು ವಾಯುಮಾಲಿನ್ಯಕ್ಕೆ ಕಾರಣವಾಗಿದ್ದು ಇಂತಹ ವಾಹನಗಳನ್ನು ಗುಜರಿಗೆ ಹಾಕಿ ಅದರ ಬಿಡಿಭಾಗವನ್ನು ಮರು ಬಳಕೆ ಮಾಡಿಕೊಳ್ಳುವ ಉದ್ದೇಶವು ಈ ನೀತಿಯಲ್ಲಿ ಅಡಕವಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಭಾರತೀಯ ಕೈಗಾರಿಕಾ ಮಹಾಒಕ್ಕೂಟ ಮತ್ತು ‘ದಿ ಹಿಂದು ಬುಸಿನೆಸ್ ಲೈನ್’ ಪತ್ರಿಕೆ ಆಯೋಜಿಸಿದ್ದ ಬಜೆಟ್ ಪೂರ್ವ ಸಂವಾದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚೆನ್ನೈ ಸೇರಿದಂತೆ ದೇಶದಾದ್ಯಂತ ಅಟೊಮೊಬೈಲ್ ಗುಚ್ಛ (ಕ್ಲಸ್ಟರ್)ಗಳನ್ನು ಆರಂಭಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಮರುಬಳಕೆಯ ವಾಹನ ಬಿಡಿಭಾಗಗಳಿಂದ ವಾಯುಮಾಲಿನ್ಯ ಕಡಿಮೆಯಾಗುತ್ತದೆ ಎಂದವರು ಹೇಳಿದರು. ಎಪ್ರಿಲ್ 1ರಿಂದ ಸರಕು ಮತ್ತು ಸೇವಾ ತೆರಿಗೆ ನಿಯಮ ಅನುಷ್ಠಾನಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನೋಟು ಅಮಾನ್ಯ ನಿರ್ಧಾರದ ಬಳಿಕ ನೋಟುಗಳ ಲಭ್ಯತೆಯ ಪ್ರಮಾಣ ಕಡಿಮೆಯಿದ್ದರೂ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ಸಮರ್ಥಿಸಿಕೊಂಡರು. ಆರಂಭದ ದಿನಗಳಲ್ಲಿ ಸಮಸ್ಯೆಯ ಪ್ರಮಾಣ ತೀವ್ರವಾಗಿತ್ತು. ಇದೀಗ ಬಹಳಷ್ಟು ಕಡಿಮೆಯಾಗಿದೆ. ಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂದ ಗಡ್ಕರಿ, ಮೋದಿ ನೇತೃತ್ವದಲ್ಲಿ ಸರಕಾರವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ 12 ಪ್ರಮುಖ ಬಂದರುಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇವು ಲಾಭವನ್ನು ದಾಖಲಿಸಿವೆ. ಕಳೆದ ವರ್ಷ ಪ್ರಮುಖ ಬಂದರುಗಳು ದಾಖಲಿಸಿದ ಲಾಭದ ಮೊತ್ತ 6 ಸಾವಿರ ಕೋಟಿ ರೂ.ಗೂ ಹೆಚ್ಚು ಎಂದವರು ತಿಳಿಸಿದರು.
ಪ್ರಸ್ತುತ ದೇಶದಲ್ಲಿ ಪ್ರತೀದಿನ ನಿರ್ಮಾಣವಾಗುತ್ತಿರುವ ರಸ್ತೆಯ ಪ್ರಮಾಣ 18 ಕಿ.ಮೀ. ಇದನ್ನು 28ರಿಂದ 30 ಕಿ.ಮೀ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಈ ಸಂದರ್ಭ ತಿಳಿಸಿದರು.