ನಿಮ್ಮ ಖಾತೆಯಿಂದ ನಗದು ತೆಗೆಯುತ್ತಿದ್ದೀರಾ ? ನಿಮ್ಮ ಜೇಬಿಗೆ ಕತ್ತರಿಯಾದೀತು..ಜೋಕೆ ! : ಕೇಂದ್ರದಿಂದ ಹೊಸ ಗಾಳ
ಹೊಸದಿಲ್ಲಿ,ಜ.13: ಭಾರತೀಯರ ಪಾಲಿಗೆ ‘ಅಚ್ಛೇ ದಿನ್’ಗಳ ಸುರಿಮಳೆಯಾಗುತ್ತಿದೆ. ಜಾಗತಿಕ ತೈಲಬೆಲೆಗಳು ಇಳಿದರೂ ದೇಶದಲ್ಲಿ ಇಳಿಯದ ಇಂಧನ ಬೆಲೆಗಳು,ಗಗನ ಚುಂಬಿಯಾಗಿರುವ ಅಗತ್ಯ ಸಾಮಗ್ರಿಗಳ ದರಗಳು, ನೋಟು ರದ್ದತಿಯ ಸಂಕಷ್ಟ....ಇತ್ಯಾದಿಗಳ ಬಳಿಕ ಇನ್ನು ಮುಂದೆ ತಮ್ಮ ಬ್ಯಾಂಕ್ ಖಾತೆಯಿಂದ ತಮ್ಮದೇ ಹಣವನ್ನು ಹಿಂಪಡೆಯುವುದಕ್ಕೂ ಭಾರತೀಯರು ತೆರಿಗೆ ಕಟ್ಟಬೇಕಾದ ದಿನಗಳು ದೂರವಿಲ್ಲ. ಡಿಜಿಟಲ್ ವಹಿವಾಟಿನತ್ತ ದೇಶವನ್ನು ಕೊಂಡೊಯ್ಯಲು ಬ್ಯಾಂಕುಗಳಿಂದ ದೊಡ್ಡ ಮೊತ್ತದ ಹಣ ಹಿಂಪಡೆಯುವಿಕೆಯ ಮೇಲೆ ತೆರಿಗೆ ಹೇರುವುದನ್ನು ಮೋದಿ ಸರಕಾರವು ಪರಿಶೀಲಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಪ್ರಸ್ತಾವನೆಗೆ ಹಸಿರು ನಿಶಾನೆ ದೊರಕಿದರೆ ಫೆ.1ರಂದು ಮಂಡನೆಯಾಗಲಿರುವ 2017-18ನೇ ಸಾಲಿನ ಮುಂಗಡ ಪತ್ರದಲ್ಲಿ ಈ ’’ನಗದು ತೆರಿಗೆ ’ ಸೇರಲಿದೆ.
2016,ಡಿಸೆಂಬರ್‌ನಲ್ಲಿ ನವೆಂಬರ್‌ಗಿಂತ ಶೇ.43ರಷ್ಟು ಹೆಚ್ಚಿನ ಡಿಜಿಟಲ್ ವಹಿವಾಟುಗಳು ನಡೆದಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಡಿಜಿಟಲ್ ವಹಿವಾಟುಗಳ ವೆಚ್ಚ ಈಗಲೂ ನೋಟು ಮುದ್ರಣ ವೆಚ್ಚಕ್ಕಿಂತ ಕಡಿಮೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪ್ರಸಕ್ತ ಡಿಜಿಟಲ್ ವಹಿವಾಟುಗಳ ವೆಚ್ಚವನ್ನು ಭರಿಸುತ್ತಿರುವರು ಹೆಚ್ಚಾಗಿ ವ್ಯಾಪಾರಿಗಳು ಮತ್ತು ಗ್ರಾಹಕರೇ ಆಗಿದ್ದಾರೆ.
ಆರ್ಥಿಕತೆಯಲ್ಲಿ ನಗದು ಹರಿವನ್ನು ತಗ್ಗಿಸುವುದು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದು ನೂತನ ತೆರಿಗೆಯ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಈ ಬಗ್ಗೆ ಹಲವಾರು ಕ್ರಮಗಳ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿವೆ ಎಂದು ಅವರು ಹೇಳಿದರು. ಅತ್ಯುನ್ನತ ರಾಜಕೀಯ ಮಟ್ಟದಲ್ಲಿ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲಾಗುತ್ತದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪ್ರಸ್ತಾಪಿಸಿದ್ದ ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ(ಬಿಸಿಟಿಟಿ)ಯನ್ನೇ ಈಗಿನ ಸರಕಾರವು ಮರಳಿ ತರುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮೂಲಗಳು ತಿಳಿಸಿದವು. ಬ್ಯಾಂಕ್ ಖಾತೆಗಳಿಂದ ನಿರ್ದಿಷ್ಟ ಮಿತಿಯನ್ನು ಮೀರಿ ಹಣ ಹಿಂಪಡೆಯುವಿಕೆಯ ಮೇಲೆ ತೆರಿಗೆ ಹೇರಲು ಬಿಸಿಟಿಟಿಯು ಸರಕಾರಕ್ಕೆ ಅವಕಾಶ ಕಲ್ಪಿಸುತ್ತದೆ.
ಬಿಸಿಟಿಟಿಯನ್ನು ಮರುಜಾರಿಗೊಳಿಸುವಂತೆ ತೆರಿಗೆ ಆಡಳಿತ ಸುಧಾರಣಾ ಆಯೋಗವೂ ಶಿಫಾರಸು ಮಾಡಿದೆ. ಕಪ್ಪುಹಣ ಕುರಿತ ವಿಶೇಷ ತನಿಖಾ ತಂಡವೂ ಮೂರು ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟಿನ ಮೇಲೆ ತೆರಿಗೆ ಹೇರುವಂತೆ ಕಳೆದ ವರ್ಷ ಶಿಫಾರಸು ಮಾಡಿತ್ತು.