×
Ad

​ಜಲ್ಲಿಕಟ್ಟು ನಿಷೇಧ ಪರ-ವಿರೋಧಿಗಳ ನಡುವೆ ಫೈಟ್ !

Update: 2017-01-13 21:47 IST

ಚೆನ್ನೈ, ಜ.13: ಪೊಂಗಲ್ ಹಬ್ಬದ ಆಚರಣೆಯ ಅಂಗವಾಗಿರುವ ಜಲ್ಲಿಕಟ್ಟು ಕ್ರೀಡೆಗೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಲು ಅಧ್ಯಾದೇಶ ಹೊರಡಿಸಬೇಕು ಎಂಬ ಬೇಡಿಕೆ ತಮಿಳುನಾಡಿನಲ್ಲಿ ಬಲಗೊಳ್ಳುತ್ತಿರುವಂತೆಯೇ, ಇಂತಹ ಯಾವುದೇ ಕ್ರಮಗಳಿಗೆ ಆಸ್ಪದ ನೀಡಬಾರದು ಎಂದು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ರಾಷ್ಟ್ರಪತಿ ಮತ್ತು ಕೇಂದ್ರ ಸರಕಾರಕ್ಕೆ ಪತ್ರ ಬರೆದು ವಿನಂತಿಸಿವೆ.

ಪ್ರಾಣಿಗಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ‘ಪೆಟಾ’ ಮತ್ತು ಭಾರತೀಯ ಪ್ರಾಣಿ ರಕ್ಷಣೆ ಸಂಘಟನೆಗಳ ಒಕ್ಕೂಟ (ಎಫ್‌ಐಎಪಿಒ)ದ ಬಗ್ಗೆ ಜಲ್ಲಿಕಟ್ಟು ಕ್ರೀಡೆಯ ಬೆಂಬಲಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಘಟನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪರಿಸರ ಸಚಿವ ಮಾಧವ ದವೆ ಅವರಿಗೆ ಪತ್ರ ಬರೆದು ಜಲ್ಲಿಕಟ್ಟು ನಿಷೇಧ ತೆರವು ಬೇಡ ಎಂದು ಒತ್ತಾಯಿಸಿದೆ.

ಅಧ್ಯಾದೇಶ ಜಾರಿಗೊಳಿಸುವ ಮೂಲಕ ಈ ಕ್ರೀಡೆ ನಡೆಯಲು ಅವಕಾಶ ಮಾಡಿಕೊಡುವುದು ಅಸಾಂವಿಧಾನಿಕ ಕ್ರಮ ಮತ್ತು ಅಧಿಕಾರದ ಅನುಚಿತ ಬಳಕೆಯ ನಿದರ್ಶನವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಅಲ್ಲದೆ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧವನ್ನು ಅನುಷ್ಠಾನಗೊಳಿಸುವಂತೆ ತಮಿಳುನಾಡು ಸರಕಾರವನ್ನು ಈ ಸಂಘಟನೆಗಳು ಆಗ್ರಹಿಸಿವೆ.

ಶಿವ ದೇಗುಲಕ್ಕೆ ನುಗ್ಗಿ ದುಷ್ಕರ್ಮಿಗಳು ನಂದಿಯ ಮೂರ್ತಿಯನ್ನು ಭಗ್ನಗೊಳಿಸಿದರೆ ಜನರು ಸುಮ್ಮನಿರುತ್ತಾರೆಯೇ. ಹಾಗಿರುವಾಗ ಜೀವಂತ ಹೋರಿಗಳನ್ನು ಹಿಂಸಿಸಲು ಯಾಕೆ ಅವಕಾಶ ಇರಬೇಕು ಎಂದು ಪೆಟಾ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ವಾ ಜೋಷಿಪುರ ಪ್ರಶ್ನಿಸಿದ್ದಾರೆ. ಯಾವುದೇ ಸಂಸ್ಕೃತಿ ಹಿಂಸೆಗೆ, ಅದರಲ್ಲೂ ಪ್ರಾಣಿಹಿಂಸೆಗೆ ಅವಕಾಶ ಮಾಡಿಕೊಡುವುದಿಲ್ಲ. ಆಕಳುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಗೌರವದ ಸ್ಥಾನವಿದೆ. ಆದ್ದರಿಂದ ಜಲ್ಲಿಕಟ್ಟು ಎಂಬ ಹಿಂಸಾರೂಪದ ಕ್ರೀಡೆ ಸರಿಯಲ್ಲ ಎಂದು ಎಫ್‌ಐಎಪಿಒ ನಿರ್ದೇಶಕ ವರದ ಮೆಹ್ರೋತ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News