ಏರ್‌ಇಂಡಿಯಾ ಸಾಫ್ಟ್‌ವೇರ್ ಖರೀದಿಯಲ್ಲಿ ಅವ್ಯವಹಾರ ಪ್ರಕರಣ : ಎಫ್‌ಐಆರ್ ದಾಖಲಿಸಿದ ಸಿಬಿಐ
ಹೊಸದಿಲ್ಲಿ, ಜ.13: ಏರ್‌ಇಂಡಿಯಾ ಸಂಸ್ಥೆಯು 2011ರಲ್ಲಿ ನಡೆಸಿದ್ದ 225 ಕೋಟಿ ರೂ. ಮೊತ್ತದ ಸಾಫ್ಟ್‌ವೇರ್ ಖರೀದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜರ್ಮನಿಯ ಎಸ್‌ಎಪಿ ಎಜಿ ಸಂಸ್ಥೆ, ಐಬಿಎಂ ಕಂಪ್ಯೂಟರ್ ಸಂಸ್ಥೆ ಮತ್ತು ಅಜ್ಞಾತ ಏರ್‌ಇಂಡಿಯಾ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಈ ವ್ಯವಹಾರ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಇದರ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಕೇಂದ್ರೀಯ ಜಾಗೃತ ಸಮಿತಿಯ ಶಿಫಾರಸಿನ ಪ್ರಕಾರ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.
ಈ ವ್ಯವಹಾರದ ಟೆಂಡರ್ ಪ್ರಕ್ರಿಯೆ, ಗುತ್ತಿಗೆ ವಹಿಸಿಕೊಟ್ಟಿರುವುದು ಇತ್ಯಾದಿ ಪ್ರಕ್ರಿಯೆಗಳ ಬಗ್ಗೆ ಸಂಶಯವಿದೆ. ಅಲ್ಲದೆ ಎಸ್‌ಎಪಿ, ಐಬಿಎಂ ಸಂಸ್ಥೆಗಳು ಈ ವ್ಯವಹಾರದಲ್ಲಿ ಅನುಚಿತ ಲಾಭ ಪಡೆದಿರುವ ಬಗ್ಗೆ ಏರ್‌ಇಂಡಿಯಾದ ಮುಖ್ಯ ಜಾಗೃತಾಧಿಕಾರಿ ವರದಿ ಸಲ್ಲಿಸಿದ ಬಳಿಕ, ಕೇಂದ್ರೀಯ ಜಾಗೃತ ಸಮಿತಿಯು ಈ ವ್ಯವಹಾರದ ಬಗ್ಗೆ ತನಿಖೆಗೆ ಶಿಫಾರಸು ಮಾಡಿತ್ತು. ಅಲ್ಲದೆ ಪೂರೈಕೆ ಮತ್ತು ವಿಲೇವಾರಿ ವಿಭಾಗದ ಪ್ರಧಾನ ನಿರ್ದೇಶಕರ ಕಚೇರಿಯಲ್ಲಿ ನೋಂದಾವಣೆ ಸಂದರ್ಭ ಆಗಿರುವ ಅವ್ಯಹಾರ ಹಾಗೂ, ಐಬಿಎಂ ಅಥವಾ ಸರಕಾರದ ಬಳಿ ಈ ವ್ಯವಹಾರದ ಬಗ್ಗೆ ಕಾರ್ಯನಿರ್ವಹಿಸಿದ್ದ ಯಾವುದೇ ವ್ಯಕ್ತಿ ಆರ್ಥಿಕ ಲಾಭ ಪಡೆದಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ತಿಳಿಸಲಾಗಿದೆ.