ಆಂಗ್ಲ ಮಾಧ್ಯಮ ಶಾಲೆಗಳ ನಿಯಂತ್ರಣಕ್ಕೆ ನಿಯಮ ರೂಪಿಸಿ: ಪ್ರೊ.ರಾಮಚಂದ್ರ

Update: 2017-01-13 18:51 GMT

 ಬ್ರಹ್ಮಾವರ, ಜ.13: ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಸರಕಾರದ್ದು ಡೋಲಾಯಮಾನ ಮನಸ್ಥಿತಿ. ಇಂದು ಪ್ರತಿವರ್ಷ ನೂರಾರು ಆಂಗ್ಲ ಮಾಧ್ಯಮ ಶಾಲೆಗಳು ಎಲ್ಲೆಡೆ ತಲೆ ಎತ್ತುತ್ತಿವೆ. ಸರಕಾರ ಅವುಗಳನ್ನು ನಿಯಂತ್ರಿಸಬೇಕಾಗಿದೆ. ಆ ನಿಟ್ಟಿನಲ್ಲಿ ನೀತಿ ನಿಯಮಗಳನ್ನು ರೂಪಿಸಬೇಕು ಮತ್ತು ಸರಕಾರಿ ಶಾಲೆಗಳಲ್ಲಿ ಸಮರ್ಥವಾದ ಅಧ್ಯಾಪಕರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು 11ನೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಸಾಹಿತಿ ಹಾಗೂ ಸಂಘಟಕ ಕಾರ್ಕಳದ ಪ್ರೊ.ಎಂ. ರಾಮಚಂದ್ರ ಹೇಳಿದ್ದಾರೆ.

ಕಸಾಪ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ ಮತ್ತು ಕೋಟ ಮಣೂರು ಸುಜ್ಞಾನ ಸಹಯೋಗದಲ್ಲಿ ಬ್ರಹ್ಮಾವರ ಸರಕಾರಿ ಪ.ಪೂ. ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದಲ್ಲಿ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಇಂದು ನಡೆದ 11ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ನುಡಿಹಬ್ಬ’ ದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡುತ್ತಿದ್ದರು.

ಮೂರು ದಿನಗಳ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿದರು.

 ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರಾಮಚಂದ್ರರ ‘ಹತ್ತು ಹಲವು’ ಲೇಖನಗಳ ಸಂಗ್ರಹ, ಜಿಲ್ಲಾ ಕಸಾಪ ಪ್ರಕಟಣೆಗಳು, ಡಾ.ನಾಗೇಶ್ ಕುಮಾರ್ ರಾವ್ ಅವರ ‘ಜೀವನ ಪಾವನ’ ಮತ್ತು ಆಲೊಓಂೀನ್ಸ್ ಡಿಸೋಜರ ‘ಮೆಲ್ಸುರಿ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಪುಸ್ತಕ ಮಳಿಗೆಯನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ವಸ್ತು ಪ್ರದರ್ಶನವನ್ನು ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ವೈದ್ಯಕೀಯ ಶಿಬಿರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ರೋಹಿಣಿ ಉದ್ಘಾಟಿಸಿದರು.

ಮಂದಾರ್ತಿ ದೇವಳದ ಮುಖ್ಯಕಾರ್ಯ ನಿರ್ವಹಣಾಕಾರಿ ರವಿ ಕೋಟ ರಗಸ್ತಿ, ತಿಮ್ಮಪ್ಪ ಹೆಗ್ಡೆ, ಬಿರ್ತಿ ರಾಜೇಶ್ ಶೆಟ್ಟಿ, ಗ್ರಾಪಂ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್., ಸರಸ್ವತಿ, ಪ್ರತಿಮಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಪುರುಷೋತ್ತಮ ಪಿ.ಕೆ., ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕುಂದಾಪುರದ ಡಾ.ಸುಬ್ರಹ್ಮಣ್ಯ ಭಟ್, ಉಡುಪಿಯ ವಸಂತಿ ಶೆಟ್ಟಿ, ಬ್ರಹ್ಮಾವರ ಹೋಬಳಿ ಅಧ್ಯಕ್ಷ ಮೋಹನ್ ಉಡುಪ ಹಂದಾಡಿ, ಅಜಪುರ ಸಂಘದ ಅಶೋಕ್ ಭಟ್, ಎಸ್.ನಾರಾಯಣ, ಪ್ರತಾಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನಕ್ಕೆ ಮುನ್ನ ಬ್ರಹ್ಮಾವರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ ಚಾಲನೆ ನೀಡಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ರಾಷ್ಟ್ರ ಧ್ವಜಾರೋಹಣ ಹಾಗೂ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಶಿಕ್ಷಣದಲ್ಲಿ ಭಾಷೆಗಳ ಆಯ್ಕೆ ಹೆತ್ತವರ ಹಾಗೂ ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ಸಂಬಂಸಿದ್ದಾಗಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪು ದುರದೃಷ್ಟಕರ. ಇದರ ವಿರುದ್ಧ ಜಯ ಸಿಗುವವರೆಗೆ ಸಂಘಟಿತವಾದ ಆಂದೋಲನ ಮಾಡಬೇಕು. ರಾಷ್ಟ್ರೀಯ ಭಾಷೆ, ರಾಷ್ಟ್ರ ಭಾಷೆ, ರಾಜ್ಯ ಭಾಷೆ ಹೀಗೆ ಮೂರು ಭಾಷೆಯನ್ನು ಮಕ್ಕಳು ಕಲಿಯುವುದು ಕಷ್ಟಕರ. ಯಾವುದಾದರೂ ಒಂದು ಭಾಷೆ ಅಥವಾ ಎರಡು ಭಾಷೆ ಸಾಕಾಗುತ್ತದೆ ಎಂದು ಪ್ರೊ.ಎಂ.ರಾಮಚಂದ್ರ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News