×
Ad

ಜಲ್ಲಿಕಟ್ಟು ಬೆಂಬಲಿಗರ ಬಂಧನ

Update: 2017-01-14 19:31 IST

ಮದುರೈ, ಜ.14: ಸಾಂಪ್ರದಾಯಿಕ ಗೂಳಿ ಮಣಿಸುವ ಸ್ಪರ್ಧೆ ‘ಜಲ್ಲಿ ಕಟ್ಟು’ ನಡೆಸುವುದಕ್ಕೆ ಸುಪ್ರೀಂಕೋರ್ಟ್ ವಿಧಿಸಿದ್ದ ನಿಷೇಧವನ್ನು ಉಲ್ಲಂಘಿಸಲು ಯತ್ನಿಸುತ್ತಿದ್ದರೆನ್ನಲಾದ ಹಲವಾರು ಮಂದಿಯನ್ನು ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜಲ್ಲಿಕಟ್ಟು ಸ್ಪರ್ಧೆಗೆ ಖ್ಯಾತವಾಗಿರುವ ಮದುರೈ ಜಿಲ್ಲೆಯ ಅವನಿಯಾಪುರಂ, ಪಾಲಮೇಡು ಹಾಗೂ ಅಲಂಗನಲ್ಲೂರ್‌ನಂತಹ ಸ್ಥಳಗಳಲ್ಲಿ ಯಾವುದೇ ಗಲಭೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಸುಪ್ರೀಂಕೋರ್ಟ್ ನಿಷೇಧದ ಹೊರತಾಗಿಯೂ ಪೊಂಗಲ್ ಹಬ್ಬದ ದಿನವಾದ ಶನಿವಾರ ವಿವಿಧ ಸಂಘಟನೆಗಳು ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

 ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ನೀಡಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಆಗ್ರಹಿಸಿದ ಹೊರತಾಗಿಯೂ, ಸುಪ್ರೀಂಕೋರ್ಟ್ ಜಲ್ಲಿಕಟ್ಟು ಬಗ್ಗೆ ಪೊಂಗಲ್ ಹಬ್ಬಕ್ಕೆ ಮುನ್ನ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲವೆಂದು ಶುಕ್ರವಾರ ತಿಳಿಸಿತ್ತು.

ಮದುರೈ ಜಿಲ್ಲೆಯ ಕರಿಸಾಲ್‌ಕುಲಂನಲ್ಲಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆಯಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಯುವಕರ ಗುಂಪೊಂದು ಸುಮಾರು ಐದು ಗೂಳಿಗಳನ್ನು ಮೈದಾನದಲ್ಲಿ ಓಡಾಡಲು ಬಿಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದೆ.. ಆದಾಗ್ಯೂ ಈ ಸಂಬಂಧ ಯಾರನ್ನೂ ಕೂಡಾ ಪೊಲೀಸರು ಬಂಧಿಸಿಲ್ಲವೆಂದು ತಿಳಿದುಬಂದಿದೆ.

  ಜಲ್ಲಿಕಟ್ಟು ಸ್ಪರ್ಧೆಗೆ ನಿಷೇಧವನ್ನು ಪ್ರತಿಭಟಿಸಿ ಶುಕ್ರವಾರ ಚೆನ್ನೈನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ವಹಿಸಿದ್ದರು. ಜಲ್ಲಿಕಟ್ಟು ನಿಷೇಧದ ಕುರಿತಾಗಿ ಚರ್ಚಿಸಲು ಬಂದ ಎಡಿಎಂಕೆ ಸಂಸದರಿಗೆ ಸಮಯಾವಕಾಶ ನೀಡದಿದ್ದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಬಲವಾಗಿ ಟೀಕಿಸಿದರು.

 ಶಿವಗಂಗಾ ಜಿಲ್ಲೆಯಲ್ಲಿ ಶುಕ್ರವಾರ ಜಲ್ಲಿಕಟ್ಟು ಬೆಂಬಲಿಗರ ಗುಂಪೊಂದು ಪ್ರಾಣಿದಯಾಸಂಘಟನೆ ಪೆಟಾ ಪರ ನಿಲುವು ಹೊಂದಿರುವ ತಮಿಳು ನಟಿ ತೃಷಾ ನಟಿಸುತ್ತಿರುವ ಗರ್ಜನೈ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ಪ್ರತಿಭಟನೆ ನಡೆಸಿತು. ಆದಾಗ್ಯೂ ಚಿತ್ರೀಕರಣದ ಸಂದರ್ಭದಲ್ಲಿ ತೃಷಾ ನಟಿ ಸ್ಥಳದಲ್ಲಿರಲಿಲ್ಲವೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News