ನೋಟು ರದ್ದತಿ: ವಾಪಸ್ ಬಂದ ನಿಷೇಧಿತ ನೋಟುಗಳು ಎಷ್ಟು ಲಕ್ಷ ಕೋಟಿ ?
ಹೊಸದಿಲ್ಲಿ,ಜ.14: ಡಿ.30ರ ವೇಳೆಗೆ ಶೇ.97ರಷ್ಟು ನಿಷೇಧಿತ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿವೆ ಎಂಬ ವರದಿಗಳನ್ನು ಆರ್‌ಬಿಐ ಅಲ್ಲಗಳೆದಿದ್ದರೂ, ಈ ವರದಿಗಳ ಲೆಕ್ಕಾಚಾರ ಸರಿಯಾಗಿಯೇ ಇತ್ತು ಎನ್ನುವುದನ್ನು ‘ಚಲಾವಣೆಯಲ್ಲಿರುವ ನೋಟುಗಳ ’ ಕುರಿತು ಅದು ಸ್ವತಃ ಬಿಡುಗಡೆಗೊಳಿಸಿರುವ ಸಾಪ್ತಾಹಿಕ ಅಂಕಿಅಂಶಗಳು ಸೂಚಿಸುತ್ತಿವೆ.
ವಾಸ್ತವದಲ್ಲಿ ಈ ಅಂಕಿಅಂಶಗಳು ಕಳೆದ ವರ್ಷದ ನ.8ರಂದು ಅಮಾನ್ಯಗೊಳಿಸಲಾಗಿದ್ದ ನೋಟುಗಳ ಪೈಕಿ ಕೇವಲ 54,000 ಕೋ.ರೂ.ಗಳ ನೋಟುಗಳು ಬ್ಯಾಂಕುಗಳಿಗೆ ವಾಪಸಾಗಿಲ್ಲ ಎನ್ನುವುದನ್ನು ಬೆಟ್ಟು ಮಾಡಿವೆ.
ಡಿ.19ರ ನಂತರ ಯಾವುದೇ ಹೊಸನೋಟುಗಳನ್ನು ಚಲಾವಣೆಗೆ ಬಿಡಲಾಗಿಲ್ಲ ಎಂಬ ಗ್ರಹಿಕೆಯನ್ನು ಆಧರಿಸಿ ಈ ಅಂಕಿಅಂಶಗಳು ಮೂಡಿಬಂದಿವೆ. ಆದರೆ ಇದು ಹೆಚ್ಚುಕಡಿಮೆ ಅಸಂಭವನೀಯವೆನ್ನುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಚಲಾವಣೆಯಲ್ಲಿತ್ತು ಎಂದು ಹೇಳಲಾಗಿದ್ದಕ್ಕಿಂತ ಹೆಚ್ಚಿನ ನಿಷೇಧಿತ ನೋಟುಗಳು ಬ್ಯಾಂಕುಗಳಿಗೆ ವಾಪಸಾಗಿವೆ ಎನ್ನುವ ಸಾಧ್ಯತೆಯನ್ನು ಇದು ಹುಟ್ಟಿಹಾಕಬಹುದು.
ಎಷ್ಟು ಹಳೆಯ ನೋಟುಗಳು ವಾಪಸಾಗಿವೆ ಎನ್ನುವ ಮಾಹಿತಿಯನ್ನು ಆರ್‌ಬಿಐ ಕಳೆದ ಬಾರಿ ಡಿ.19ರಂದು ಹೊರಗೆ ಹಾಕಿತ್ತು. ಚಲಾವಣೆಗೆ ಬಿಡಲಾಗಿರುವ ಹೊಸನೋಟುಗಳ ಲೆಕ್ಕವೂ ಆಗ ಲಭ್ಯವಾಗಿರಲಿಲ್ಲ.
ಶುಕ್ರವಾರ,ಜ.13ರಂದು ಬಿಡುಗಡೆಗೊಳಿಸಿದ ತನ್ನ ಸಾಪ್ತಾಹಿಕ ಅಂಕಿಅಂಶಗಳ ಪುರವಣಿಯಲ್ಲಿ ಆರ್‌ಬಿಐ,ಜ.6ವರೆಗೆ ಚಲಾವಣೆಯಲ್ಲಿದ್ದ ಕರೆನ್ಸಿಗಳ ಮೊತ್ತ 8.98 ಲ. ಕೋ.ರೂ. ಎಂದು ಹೇಳಿದೆ.
ಇದರಲ್ಲಿ 500 ಮತ್ತು 2,000 ರೂ.ಗಳ ಹೊಸನೋಟುಗಳು,10,20,50 ಮತ್ತು 100 ರೂ.ಗಳ ಹೊಸ ಮತ್ತು ಹಳೆಯ ನೋಟುಗಳು ಮತ್ತು ಬ್ಯಾಂಕುಗಳಿಗೆ ವಾಪಸ್ ಬರದಿದ್ದ ನಿಷೇಧಿತ 500 ಹಾಗೂ 1,000 ರೂ,ಗಳ ನೋಟುಗಳು ಸೇರಿದ್ದವು.
ಶೇ.97ರಷ್ಟು ನಿಷೇಧಿತ ನೋಟುಗಳು ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿಬಂದಿವೆ ಎಂಬ ಸುದ್ದಿಸಂಸ್ಥೆ ಬ್ಲೂಮ್‌ಬರ್ಗ್‌ನ ವರದಿಯನ್ನು ಜ.5ರಂದು ಅಲ್ಲಗಳೆದಿದ್ದ ಆರ್‌ಬಿಐ, ಅಂಕಿಅಂಶಗಳನ್ನು ಭೌತಿಕ ನೋಟುಗಳ ಶಿಲ್ಕಿನೊಂದಿಗೆ ತಾಳೆಹಾಕಿ ಪರಿಶೀಲಿಸಬೇಕಿದೆ. ಅಲ್ಲಿಯವರೆಗೆ ಯಾವುದೇ ವರದಿ ಸರಿಯಾದ ಸಂಖ್ಯೆಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿತ್ತು.
ಎಷ್ಟು ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎನ್ನುವುದನ್ನು ಆರ್‌ಬಿಐ ಅಂಕಿಅಂಶಗಳಿಂದ ಲೆಕ್ಕ ಹಾಕಬಹುದು.
ನ.8ರಂದು 15.44 ಲ.ಕೋ.ರೂಗಳ ಹಳೆಯ 500 ಮತ್ತು 1,000 ರೂ.ಮುಖಬೆಲೆಗಳ 17,165 ಮಿಲಿಯನ್ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಸಹಾಯಕ ವಿತ್ತ ಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರು ಡಿ.2ರಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.
ಇದು ಚಲಾವಣೆಯಲ್ಲಿದ್ದ ಒಟ್ಟು 17.95 ಲ.ಕೋ.ರೂ.ಗಳ ಶೇ.86ರಷ್ಟಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು. ಆರ್‌ಬಿಐ ವರದಿಯಂತೆ ಇದು ನ,4ರಂದು 17.97 ಲ.ಕೋ.ರೂ.ಆಗಿತ್ತು.
ನ.10ರಿಂದ ಡಿ.30ರವರೆಗೆ ಹಳೆಯ ನೋಟುಗಳು ಬ್ಯಾಂಕುಗಳಲ್ಲಿ ಜಮಾ ಆಗಿದ್ದು, ಆರ್‌ಬಿಐ 10 ರೂ.ನಿಂದ 500,2000 ರೂ.ಮುಖಬೆಲೆಯವರೆಗಿನ ಹೊಸನೋಟು ಗಳನ್ನು ಹಂತಹಂತವಾಗಿ ವಿತರಿಸಿದೆ.
ಮೀಸಲು ಹಣ ಕುರಿತು ಆರ್‌ಬಿಐನ ನ.18ರ ಹೇಳಿಕೆಯಂತೆ 2.51ಲ.ಕೋ.ರೂ. (ಶೇ.14)ಗಳ ಸಣ್ಣ ನೋಟುಗಳು,ಹೊಸ ನೋಟುಗಳು ಮತ್ತು ನಿಷೇಧಿತ ನೋಟುಗಳು ಸೇರಿದಂತೆ 14.27 ಲ.ಕೋ.ರೂ.ಗಳು ಚಲಾವಣೆಯಲ್ಲಿದ್ದವು.
ಡಿ.6ರವರೆಗೆ ಒಟ್ಟು 4 ಲ.ಕೋ.ರೂ.ಗಳ ಹೊಸನೋಟುಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಪೈಕಿ 100 ರೂ.ವರೆಗಿನ 19.1 ಬಿಲಿಯನ್ ನೋಟು(1.06 ಲ.ಕೋ.ರೂ.)ಗಳಿದ್ದು,ಉಳಿದ 2.94ಲ.ಕೋ.ರೂ.ಗಳು 500 ಮತ್ತು 2,000 ರೂ.ನೋಟುಗಳಾಗಿವೆ ಎಂದು ಆರ್‌ಬಿಐ ಡಿ.7ರಂದು ತಿಳಿಸಿತ್ತು.
ಡಿ.19ರಂದು ಆರ್‌ಬಿಐ ಹೊರಡಿಸಿದ್ದ ಮೀಸಲು ಹಣ ಹೇಳಿಕೆಯಂತೆ, 9.81ಲ.ಕೋ.ರೂ.ಗಳು ಚಲಾವಣೆಯಲ್ಲಿದ್ದವು. ಇದು ಈಗಾಗಲೇ ನ.8ರಂದು ಚಲಾವಣೆಯಲ್ಲಿದ್ದ 2.51 ಲ.ಕೋ.ರೂ.ಗಳ ಸಣ್ಣ ನೋಟುಗಳು, 1.06 ಲ.ಕೋ.ರೂ.ಗಳ ಹೊಸ ಸಣ್ಣ ನೋಟುಗಳು ಮತ್ತು 2.94 ಕೋ.ರೂ.ಗಳ ಹೊಸ 500 ಮತ್ತು 2,000 ರೂ.ಗಳ ಒಟ್ಟು 6.51ಲ.ಕೋ.ರೂ.ಗಳನ್ನು ಒಳಗೊಂಡಿತ್ತು. ಇದರರ್ಥ ಡಿ.9ರಂದು ಕೇವಲ 3.30 ಲ.ಕೋ.ರೂಗಳ ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳುವುದು ಬಾಕಿಯಿತ್ತು.
ಅಂದರೆ ಅದಾಗಲೇ ನಿಷೇಧಿತ 15.44 ಲ.ಕೋ.ರೂ.ಗಳ ನೋಟುಗಳ ಪೈಕಿ 12.14 ಲ.ಕೋ.ರೂಗಳ ನೋಟುಗಳು ವಾಪಸ್ ಬಂದಿದ್ದವು. ಇದು ಡಿ.10ರಂದು ಆರ್‌ಬಿಐ ಉಪ ಗವರ್ನರ್ ಆರ್ ಗಾಂಧಿ ಅವರು ಮಾಧ್ಯಮಗಳಿಗೆ ನೀಡಿದ್ದ ಸಂಖ್ಯೆ 12.44 ಲ.ಕೋ.ಗೆ ಸುಮಾರಾಗಿ ತಾಳೆಯಾಗುತ್ತದೆ.
ಡಿ.19ರಂದು ಅರ್‌ಬಿಐ ಮತ್ತೊಮ್ಮೆ ಚಲಾವಣೆಗೆ ಬಿಡಲಾದ ನೋಟುಗಳ ವಿವರಗಳನ್ನು ನೀಡಿತ್ತು. 100 ರೂ.ವರೆಗಿನ 20.4 ಬಿ. ಮತ್ತು 500/1000 ರೂ.ಗಳ 2.2 ಬಿ.ನೋಟುಗಳನ್ನು ಬಿಡುಗಡೆಗೊಳಿಸಿರುವುದಾಗಿ ಹೇಳಿತ್ತು. ಇವುಗಳ ಒಟ್ಟು ಮೌಲ್ಯ 5.93 ಲ.ಕೋ.ರೂ.ಆಗಿತ್ತು.
ಚಲಾವಣೆಯಲ್ಲಿರುವ ಕರೆನ್ಸಿಗಳ ಮೊತ್ತ 8.98 ಲ.ಕೋ.ರೂ.ಎಂಬ ಆರ್‌ಬಿಐನ ಜ.ರ ಹೇಳಿಕೆಯನ್ನು ಈಗ ತೆಗೆದುಕೊಳ್ಳೋಣ. ಡಿ.19ರ ನಂತರ ಹೊಸನೋಟುಗಳನ್ನು ಬಿಡುಗಡೆಗೊಳಿಸಿಲ್ಲ ಎಂದು ನಾವೂ ಭಾವಿಸಿದರೂ(ಇದು ತೀರ ಅಸಂಭವ) ಮೊದಲೇ ಚಲಾವಣೆಯಲ್ಲಿದ್ದ ಸಣ್ಣ ನೋಟುಗಳೊಂದಿಗೆ ಹೊಸ ಸಣ್ಣ ನೋಟುಗಳು ಮತ್ತು ದೊಡ್ಡನೋಟುಗಳು ಸೇರಿದರೆ ಒಟ್ಟು ಚಲಾವಣೆಯಲ್ಲಿರುವ ಹಣ 8.44 ಲ.ಕೋ.ರೂ.ಆಗುತ್ತದೆ. ಹೀಗಾಗಿ ಕೇವಲ 54,000 ಕೋ.ರೂ.ಮೌಲ್ಯದ ನಿಷೇಧಿತ ನೋಟುಗಳು ಮಾತ್ರ ವಾಪಸಾಗಬೇಕಿವೆ. ಅಂದರೆ ಆರ್‌ಬಿಐನ ಅಂಕಿಅಂಶಗಳ ಮೇರೆಗೆಯೇ 14.90 ಲ.ಕೋ.ರೂ ಅಥವಾ ಶೇ.96.5 ರಷ್ಟು ಮೂಲ ಮೊತ್ತ ವಾಪಸಾಗಿದೆ.
ಆದರೆ ಡಿ.19ರ ಬಳಿಕ ಹೊಸನೋಟುಗಳು ಸೇರ್ಪಡೆಗೊಂಡಿದ್ದರೆ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬದಲಾಗಬಹುದು.ಇದೇ ಕಾರಣಕ್ಕೆ ಆರ್‌ಬಿಐ ಅಂತಿಮ ಸಂಖ್ಯೆಯನ್ನು ಬಹಿರಂಗಗೊಳಿಸಲು ಹಿಂದೇಟು ಹೊಡೆಯುತ್ತಿದೆಯೇ?