ಟರ್ಕಿ ನೈಟ್‌ಕ್ಲಬ್ ದಾಳಿ: ಇಬ್ಬರು ಚೀನಾ ರಾಷ್ಟ್ರೀಯರ ಬಂಧನ
Update: 2017-01-14 20:37 IST
ಇಸ್ತಾಂಬುಲ್, ಜ. 14: ಟರ್ಕಿಯ ನಗರ ಇಸ್ತಾಂಬುಲ್‌ನ ನೈಟ್ ಕ್ಲಬ್ ಒಂದರಲ್ಲಿ ಹೊಸ ವರ್ಷಾಚರಣೆಯಲ್ಲಿ ನಿರತರಾಗಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಟರ್ಕಿ ಉಯಿಘುರ್ ವಲಯದ ಇಬ್ಬರು ಚೀನಾ ರಾಷ್ಟ್ರೀಯರನ್ನು ಬಂಧಿಸಿದೆ.
ಈ ದಾಳಿಯನ್ನು ತಾನು ನಡೆಸಿದ್ದಾಗಿ ಐಸಿಸ್ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿತ್ತು.
ದಾಳಿಯಲ್ಲಿ 39 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 27 ಮಂದಿ ಲೆಬನಾನ್, ಸೌದಿ ಅರೇಬಿಯ, ಇಸ್ರೇಲ್, ಇರಾಕ್ ಮತ್ತು ಮೊರೊಕ್ಕೊ ಸೇರಿದಂತೆ ವಿದೇಶೀಯರು.
ಐಸಿಸ್‌ನ ಸದಸ್ಯತ್ವ ಹೊಂದಿರುವುದು, ಪರವಾನಿಗೆರಹಿತ ಶಸ್ತ್ರಗಳನ್ನು ಖರೀದಿಸಿರುವುದು ಹಾಗೂ 39 ಜನರ ಸಾವಿಗೆ ಕಾರಣರಾಗಿರುವ ಆರೋಪಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸರಕಾರಿ ಒಡೆತನದ ಅನಡೊಲು ವಾರ್ತಾ ಸಂಸ್ಥೆ ಪ್ರಾಸಿಕ್ಯೂಟರ್ ಒಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬೃಹತ್ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಬಂದೂಕುಧಾರಿಯು ಈಗಲೂ ತಲೆತಪ್ಪಿಸಿಕೊಂಡಿದ್ದಾನೆ.