×
Ad

ಹಿಟ್ಲರ್, ಮುಸಲೋನಿ ಕೂಡಾ ಬಲಶಾಲಿ ಬ್ರಾಂಡ್‌ಗಳು: ಹರ್ಯಾಣ ಸಚಿವನ ‘ಮೋದಿ-ಗಾಂಧಿ’ ಹೇಳಿಕೆಗೆ ರಾಹುಲ್ ಕಟಕಿ

Update: 2017-01-14 22:17 IST

ಹೊಸದಿಲ್ಲಿ, ಜ.14: ಖಾದಿಯ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹಾತ್ಮಾಗಾಂಧಿಗಿಂತಲೂ ಉತ್ತಮ ಬ್ರಾಂಡ್ ಆಗಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಹರ್ಯಾಣ ಸಚಿವ ಅನಿಲ್ ವಿಜ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ವಾಧಿಕಾರಿಗಳಾದ ಹಿಟ್ಲರ್, ಮುಸಲೋನಿ ಕೂಡಾ ಅತ್ಯಂತ ಬಲಶಾಲಿ ಬ್ರಾಂಡ್‌ಗಳೆಂದು ಅವರು ಟ್ವಿಟರ್‌ನಲ್ಲಿ ಕಟಕಿಯಾಡಿದ್ದಾರೆ.
    ಖಾದಿ ಹಾಗೂ ಗ್ರಾಮೋದ್ಯಮ ಆಯೋಗ (ಕೆವಿಐಸಿ)ವು ತನ್ನ ಕ್ಯಾಲೆಂಡರ್ ಹಾಗೂ ಡೈರಿಯಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮುದ್ರಿಸಿರುವುದು ಒಳ್ಳೆಯದೇ ಆಗಿದೆ. ಮೋದಿಯು ಗಾಂಧಿಗಿಂತ ಉತ್ತಮ ಬ್ರಾಂಡ್ ಆಗಿದ್ದಾರೆ. ಕ್ರಮೇಣ ಕರೆನ್ಸಿ ನೋಟುಗಳಿಂದಲೂ ಗಾಂಧೀಜಿಯವರ ಚಿತ್ರವನ್ನು ತೆಗೆದುಹಾಕಲಾಗುವುದೆಂದು ವಿಜ್ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.‘‘ಖಾದಿಯ ಜೊತೆ ಗಾಂಧಿಯ ಹೆಸರು ಥಳಕುಹಾಕಿಕೊಂಡ ಕಾರಣ ಅದು ಮೂಲೆಗುಂಪಾಯಿತು. ಗಾಂಧಿಯ ಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಿದ ಬಳಿಕ ಕರೆನ್ಸಿ ಕೂಡಾ ಅಪವೌಲ್ಯಗೊಂಡಿತು ಎಂದು ವಿಜ್ ಹೇಳಿದ್ದರು.

ಹಿಂದೆಸರಿದ ವಿಜ್

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಾಂಧಿಗಿಂತ ಮೋದಿ ಉತ್ತಮ ಬ್ರಾಂಡ್ ಎಂಬ ತನ್ನ ವಿವಾದಾಸ್ಪದ ಹೇಳಿಕೆಯನ್ನು ಹರ್ಯಾಣ ಸಚಿವ ಅನಿಲ್ ವಿಜ್ ಹಿಂತೆಗೆದುಕೊಂಡಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅವರು, ‘‘ ಮಹಾತ್ಮ ಗಾಂಧಿಗೆ ಸಂಬಂಧಿಸಿ ನಾನು ವೈಯಕ್ತಿಕ ನೆಲೆಯಲ್ಲಿ ಹೇಳಿಕೆ ನೀಡಿದ್ದೇನೆ. ಈ ಹೇಳಿಕೆಗಳು ಯಾರದಾದರೂ ಭಾವನೆಗಳಿಗೆ ಘಾಸಿಯುಂಟು ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ನಾನದನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ’’ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News