ಪಂಜಾಬ್ ಮಾಜಿ ಸಿಎಂ ಬರ್ನಾಲ ಇನ್ನಿಲ್ಲ
ಚಂಡೀಗಢ,ಜ.14: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಸುರ್ಜಿತ್‌ಸಿಂಗ್ ಬರ್ನಾಲಾ ಶನಿವಾರ ನಿಧನರಾಗಿದ್ದಾರೆ.ಅವರಿಗೆ 91 ವರ್ಷ ವಯಸ್ಸಾಗಿತ್ತು. 80ರ ದಶಕದಲ್ಲಿ ಪಂಜಾಬ್‌ನಲ್ಲಿ ಉಗ್ರಗಾಮಿ ಚಟುವಟಿಕೆಗಳು ಪರಾಕಾಷ್ಠೆಗೆ ತಲುಪಿದ್ದ ಸಂದರ್ಭದಲ್ಲಿ ಸುರ್ಜಿತ್ ಸಿಂಗ್ ಬರ್ನಾಲಾ ಆ ರಾಜ್ಯವನ್ನು ಮುನ್ನಡೆಸಿದ್ದರು. ಅವರು 1985ರಿಂದ1987ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಹೃದಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಬರ್ನಾಲ ಅವರನ್ನು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕಾಲಿದಳದ ಸೌಮ್ಯವಾದಿ ಬಣದ ನಾಯಕರೆಂದೇ ಗುರುತಿಸಲ್ಪಟ್ಟಿದ್ದ ಬರ್ನಾಲಾ, 1985ರಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದ ಪೀಡಿತವಾಗಿದ್ದ ಪಂಜಾಬ್‌ನಲ್ಲಿ ಶಾಂತಿ ಸ್ಥಾಪನೆಯ ಉದ್ದೇಶದಿಂದ ಏರ್ಪಟ್ಟಿದ್ದ ರಾಜೀವ್-ಲೊಂಗೊವಾಲ ಒಪ್ಪಂದದ ಬಳಿಕ ಆ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು.
1991ರಲ್ಲಿ ಚಂದ್ರಶೇಖರ್ ಅಲ್ಪಾವಧಿಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬರ್ನಾಲ ತಮಿಳುನಾಡು ರಾಜ್ಯಪಾಲರಾಗಿದ್ದರು. ಕೇಂದ್ರ ಸರಕಾರದ ಶಿಫಾರಸಿನ ಹೊರತಾಗಿಯೂ ಡಿಎಂಕೆ ಸರಕಾರವನ್ನು ವಜಾಗೊಳಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಿಹಾರಕ್ಕೆ ವರ್ಗಾಯಿಸಿದಾಗ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಬರ್ನಾಲ ಅವರು ಉತ್ತರಾಖಂಡ, ಆಂಧ್ರಪ್ರದೇಶ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. 1977ರಿಂದ 1978ರವರೆಗೆ ಅವರು ಮುರಾರ್ಜಿ ದೇಸಾಯಿ ಸರಕಾರದಲ್ಲಿ ಕೃಷಿ ಸಚಿವರಾಗಿದ್ದರು. ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿಯೂ ಅವರು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದರು. ಅಕಾಲಿದಳದ ಮಾಜಿ ಹಿರಿಯ ನಾಯಕರಾದ ಬರ್ನಾಲ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.