×
Ad

ಮೊದಲ ಟೆಸ್ಟ್: ಬಾಂಗ್ಲಾದೇಶಕ್ಕೆ ಕಿವೀಸ್ ತಿರುಗೇಟು

Update: 2017-01-14 23:04 IST

ವೆಲ್ಲಿಂಗ್ಟನ್, ಜ.14: ಆರಂಭಿಕ ಬ್ಯಾಟ್ಸ್‌ಮನ್ ಲಥಾಮ್ ದಾಖಲಿಸಿದ ಅಜೇಯ ಶತಕದ(119) ಸಹಾಯದಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ 2ನೆ ದಿನದಾಟದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 292 ರನ್ ಗಳಿಸಿದ್ದು, ಫಾಲೋ-ಆನ್ ಭೀತಿಯಿಂದ ಪಾರಾಗುವ ವಿಶ್ವಾಸದಲ್ಲಿದೆ.

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 595 ರನ್ ಗಳಿಸಿ ಆಲೌಟಾಯಿತು. ಇದಕ್ಕೆ ಉತ್ತರಿಸಹೊರಟ ಕಿವೀಸ್‌ಗೆ ಲಥಾಮ್ ಆಸರೆಯಾಗಿದ್ದಾರೆ.

ಆರನೆ ಶತಕ ಬಾರಿಸಿದ ಟಾಮ್ ಲಥಾಮ್(ಅಜೇಯ 119, 222 ಎಸೆತ, 13 ಬೌಂಡರಿ) ನಿಕೊಲ್ಸ್(ಅಜೇಯ 35) ಅವರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿದರು. ತಂಡವನ್ನು ಫಾಲೋ-ಆನ್ ಭೀತಿಯಿಂದ ಪಾರಾಗಿಸುವ ವಿಶ್ವಾಸ ಮೂಡಿಸಿದ್ದಾರೆ.

ಕಿವೀಸ್ ಪರ ಮೊದಲ ವಿಕೆಟ್‌ಗೆ 54 ರನ್ ಸೇರಿಸಿದ ರಾವಲ್ ಹಾಗೂ ಲಥಾಮ್ ಸಾಧಾರಣ ಆರಂಭ ನೀಡಿದರು. ರಾವಲ್ ನಿರ್ಗಮನದ ಬಳಿಕ ಲಥಾಮ್ ಹಾಗೂ ನಾಯಕ ವಿಲಿಯಮ್ಸನ್(53 ರನ್) 2ನೆ ವಿಕೆಟ್‌ಗೆ 77 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ವಿಲಿಯಮ್ಸನ್ ಔಟಾದ ಬಳಿಕ ಲಥಾಮ್‌ರೊಂದಿಗೆ ಕೈಜೋಡಿಸಿದ ರಾಸ್ ಟೇಲರ್(40 ರನ್) 3ನೆ ವಿಕೆಟ್ ಜೊತೆಯಾಟದಲ್ಲಿ 73 ರನ್ ಸೇರಿಸಿದರು. ಕಳೆದ ನವೆಂಬರ್‌ನಲ್ಲಿ ಕಣ್ಣಿನ ಸರ್ಜರಿಗೆ ಒಳಗಾದ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ ಟೇಲರ್ 40 ರನ್‌ಗೆ ವಿಕೆಟ್ ಒಪ್ಪಿಸಿದರು.

ಬಾಂಗ್ಲಾದ ಪರ ಕಮ್ರುಲ್ ಇಸ್ಲಾಂ(2-53) ಯಶಸ್ವಿ ಬೌಲರ್ ಎನಿಸಿಕೊಂಡರು.

ಬಾಂಗ್ಲಾ 595/8: ಇದಕ್ಕೆ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 542 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ತಂಡ ನಿನ್ನೆಯ ಮೊತ್ತಕ್ಕೆ 53 ರನ್ ಸೇರಿಸಿ 8 ವಿಕೆಟ್ ನಷ್ಟಕ್ಕೆ 595 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಬಾಂಗ್ಲಾದ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ 5ನೆ ದಾಂಡಿಗ ಎನಿಸಿಕೊಂಡ ಶಬ್ಬೀರ್ರಹ್ಮಾನ್(ಅಜೇಯ 54) ಔಟಾಗದೆ ಉಳಿದರು. ಕಿವೀಸ್‌ನ ಪರ ವಾಗ್ನರ್(4-151) ಯಶಸ್ವಿ ಬೌಲರ್ ಎನಿಸಿಕೊಂಡರು. ಬೌಲ್ಟ್(2-131) ಹಾಗೂ ಸೌಥಿ(2-158) ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News