ಶಿಕ್ಷಣ ಸರಕಲ್ಲ, ವಿದ್ಯಾರ್ಥಿ ಗ್ರಾಹಕನಲ್ಲ : ಗ್ರಾಹಕರ ವೇದಿಕೆ ಉಲ್ಲೇಖ
ಹೊಸದಿಲ್ಲಿ, ಜ.15: ಸಂಸ್ಥೆಗೆ ಪ್ರವೇಶ ಪಡೆಯುವ ಸಂದರ್ಭ ನೀಡಿದ್ದ ಆಶ್ವಾಸನೆಯನ್ನು ನಿರಾಕರಿಸಿದ ಸಂಸ್ಥೆಯೊಂದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿದ್ಯಾರ್ಥಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಗ್ರಾಹಕರ ವೇದಿಕೆ ತಳ್ಳಿ ಹಾಕಿದೆ.
ಶಿಕ್ಷಣ ಮುಗಿಸಿದ ಬಳಿಕ ಪ್ರಶಿಕ್ಷಕನಾಗಿ ಅವಕಾಶ ಅಥವಾ ಉದ್ಯೋಗ ನೀಡುವ ಭರವಸೆಯನ್ನು ಪ್ರವೇಶ ಪಡೆಯುವ ಸಂದರ್ಭ ನೀಡಿದ್ದ ಖಾಸಗಿ ಸಂಸ್ಥೆಯೊಂದು ಆ ಬಳಿಕ ಇದನ್ನು ನಿರಾಕರಿಸಿದೆ . ಆದ್ದರಿಂದ ತಾನು ಪಾವತಿಸಿದ್ದ 3.52 ಲಕ್ಷ ಶುಲ್ಕವನ್ನು ಎಂಬುದು ವಿದ್ಯಾರ್ಥಿಯ ಕೋರಿಕೆಯಾಗಿತ್ತು. ಜೊತೆಗೆ ತಾನು ಅನುಭವಿಸಿದ ಮಾನಸಿಕ ಕಿರಿಕಿರಿಗೆ ಪರಿಹಾರವಾಗಿ 40 ಸಾವಿರ ರೂ. ಹೆಚ್ಚುವರಿ ನೀಡುವಂತೆ ಆದೇಶಿಸಬೇಕು ಎಂಬುದು ನೋಯ್ಡಾದ ವಿದ್ಯಾರ್ಥಿಯ ಕೋರಿಕೆಯಾಗಿತ್ತು.
ಆದರೆ ಈ ಪ್ರಕರಣದಲ್ಲಿ ಇದಿರು ಪಕ್ಷ ಶಿಕ್ಷಣ ಸಂಸ್ಥೆಯಾಗಿದೆ. ಶಿಕ್ಷಣ ಎಂಬುದು ಸರಕಲ್ಲ ಮತ್ತು ಶಿಕ್ಷಣ ಸಂಸ್ಥೆಯವರು ಸೇವೆಯನ್ನು ಒದಗಿಸುವವರು ಅಲ್ಲ ಎಂದು ಸುಪ್ರೀಂಕೋರ್ಟ್ , ರಾಷ್ಟ್ರೀಯ ಅಥವಾ ರಾಜ್ಯ ಗ್ರಾಹಕ ವೇದಿಕೆ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಅರ್ಜಿದಾರ ಗ್ರಾಹಕನಲ್ಲ ಎಂದು ಆರ್.ಎಸ್.ಬಾಗ್ರಿ ನೇತೃತ್ವದ ಪೀಠವೊಂದು ತಿಳಿಸಿದೆ.
ಈ ಪ್ರಕರಣವು ಗ್ರಾಹಕರ ಸುರಕ್ಷಾ ಕಾಯ್ದೆಯಡಿ ಬರುವುದಿಲ್ಲ ಎಂಬ ಪ್ರತಿವಾದಿಗಳ ವಾದವನ್ನು ವೇದಿಕೆ ಎತ್ತಿಹಿಡಿದಿದ್ದು ಶಿಕ್ಷಣ ಸರಕಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.