ಇಂದಿನಿಂದ 5 ದಿನ ಜಾಗತಿಕ ಆರ್ಥಿಕ ವೇದಿಕೆ ಸಮಾವೇಶ
ಡಾವೊಸ್ (ಸ್ವಿಟ್ಸರ್‌ಲ್ಯಾಂಡ್), ಜ. 15: ಜಾಗತಿಕ ಆರ್ಥಿಕ ವೇದಿಕೆಯ ಐದು ದಿನಗಳ ವಾರ್ಷಿಕ ಸಭೆ ಸ್ವಿಟ್ಸರ್‌ಲ್ಯಾಂಡ್‌ನ ಈ ಸ್ಕಿ ರಿಸಾರ್ಟ್ ನಗರದಲ್ಲಿ ಸೋಮವಾರ ಆರಂಭಗೊಳ್ಳಲಿದೆ. ಜಗತ್ತಿನ ಶ್ರೀಮಂತರು ಮತ್ತು ಪ್ರಭಾವಿ ವ್ಯಕ್ತಿಗಳು ಹಾಗೂ ಬ್ರಿಟನ್, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸರಕಾರಿ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಾಗತಿಕ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುವ ಈ ಸಮ್ಮೇಳನದಲ್ಲಿ ಭಾರತದಿಂದ 100ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್, ನೀತಿ ಆಯೋಗದ ಅರವಿಂದ ಪನಗರಿಯ, ಡಿಐಪಿಪಿ ಕಾರ್ಯದರ್ಶಿ ರಮೇಶ್ ಅಭಿಶೇಕ್ ಮತ್ತು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮುಂತಾದ ಪ್ರಮುಖರು ಭಾರತೀಯ ನಿಯೋಗದಲ್ಲಿದ್ದಾರೆ.
ಸಭೆಯಲ್ಲಿ ಮೋದಿ ಸರಕಾರದ ನೋಟ್ ಅಮಾನ್ಯ ಹಾಗೂ ಅಮೆರಿಕದಲ್ಲಿ ಟ್ರಂಪ್ ಸರಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ‘ಅಜಾಗತೀಕರಣ’ ಬೆದರಿಕೆಯ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯುವುದೆಂದು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಭಾರತದ ಕುರಿತು ವಿಶೇಷ ಚರ್ಚಾ ಅಧಿವೇಶನವೊಂದನ್ನು ಏರ್ಪಡಿಸಲಾಗುವುದು. ಈ ಅಧಿವೇಶನದಲ್ಲಿ ದೇಶದ ಭ್ರಷ್ಟಾಚಾರ ನಿಗ್ರಹ ಮತ್ತು ತೆರಿಗೆ ಸುಧಾರಣೆ ಕಾರ್ಯಕ್ರಮಗಳು ಹಾಗೂ ಅವುಗಳ ಫಲಿತಾಂಶಗಳು ಹೇಗೆ ಸರ್ವರನ್ನೂ ತಲುಪುತ್ತವೆ ಬಗ್ಗೆ ಚರ್ಚೆ ನಡೆಯಲಿದೆ.
ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ನಿಗ್ರಹದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಹಿಮಾಚ್ಛಾದಿತ ಡಾವೋಸ್‌ನಲ್ಲಿ ಮುಂದಿನ ಐದು ದಿನಗಳಲ್ಲಿ ಉಷ್ಣತೆ ಮೈನಸ್ 20 ಡಿಗ್ರಿವರೆಗೂ ಕುಸಿಯುವ ಸಾಧ್ಯತೆಯಿದೆ.