×
Ad

ಸಿಬಿಐ ಮುಖ್ಯಸ್ಥರ ಆಯ್ಕೆಗಾಗಿ ನಾಳೆ ಪ್ರಧಾನಿ ನೇತೃತ್ವದ ಸಮಿತಿ ಸಭೆ

Update: 2017-01-15 20:13 IST

ಹೊಸದಿಲ್ಲಿ,ಜ.15: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿಯು ಸೋಮವಾರ ಇಲ್ಲಿ ಸಭೆ ಸೇರಿ ಸಿಬಿಐ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಿದೆ.

ಡಿ.2ರಂದು ಅನಿಲ್ ಸಿನ್ಹಾ ಅವರ ನಿವೃತ್ತಿಯ ಬಳಿಕ ಸಿಬಿಐ ನಿರ್ದೇಶಕರ ಹುದ್ದೆ ಖಾಲಿಯಾಗಿಯೇ ಇದೆ. ಪ್ರಸಕ್ತ ಗುಜರಾತ್ ಕೇಡರ್‌ನ ರಾಕೇಶ ಅಸ್ಥಾನಾ ಅವರು ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮ ನಿರ್ದೇಶನ ಮಾಡಿದ ವ್ಯಕ್ತಿ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದಾರೆ. ನೂತನ ನಿರ್ದೇಶಕರ ಆಯ್ಕೆಗಾಗಿ ಸುಮಾರು 45 ಅರ್ಹ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಪ್ರಧಾನಿ ಕಚೇರಿಗೆ ಸಲ್ಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಇಂದಿಲ್ಲಿ ತಿಳಿಸಿದವು.

ಈ ಹುದ್ದೆಗೆ ಪ್ರಬಲ ಸ್ಪರ್ಧಿಗಳಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಕೃಷ್ಣ ಚೌಧರಿ, ಅರುಣಾ ಬಹುಗುಣ ಮತ್ತು ಎಸ್.ಸಿ.ಮಾಥೂರ್ ಅವರ ಹೆಸರುಗಳು ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News