ಯುವತಿಗೆ ಕಿರುಕುಳ : ಸಂಗೀತ ಕಾರ್ಯಕ್ರಮ ನಿಲ್ಲಿಸಿ ಸಹಾಯಕ್ಕೆ ಧಾವಿಸಿದ ಆತಿಫ್ ಅಸ್ಲಮ್
ಇಸ್ಲಾಮಾಬಾದ್,ಜ.16 : ಖ್ಯಾತ ಪಾಕಿಸ್ತಾನಿ ಗಾಯಕ ಆತಿಫ್ ಅಸ್ಲಮ್ ಅವರು ಇತ್ತೀಚೆಗೆ ತಮ್ಮ ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗ ಕೆಲವರು ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದಾರೆಂದು ತಿಳಿದಿದ್ದೇ ತಡ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ ಸಂತ್ರಸ್ತ ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ.
ಈ ಘಟನೆಯ ವೀಡಿಯೊವನ್ನು ಎಫ್‌ಎಚ್‌ಎಂ ಪಾಕಿಸ್ತಾನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಈ ವೀಡಿಯೊದಲ್ಲಿ ಅಸ್ಲಮ್ ಅವರು ತಮ್ಮ ತಂಡಕ್ಕೆ ಅರ್ಧದಲ್ಲಿಯೇ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹೇಳುವ ದೃಶ್ಯವಿದೆ. ಮೊದಲ ಸಾಲಿನಲ್ಲಿ ಕುಳಿತ ಹುಡುಗರ ಗುಂಪೊಂದು ಹುಡುಗಿಯೊಬ್ಬಳಿಗೆ ಚೇಷ್ಟೆ ಮಾಡುತ್ತಿರುವುದನ್ನು ನೋಡಿ ಅವರನ್ನುದ್ದೇಶಿಸಿ ‘‘ನೀವು ಯಾವತ್ತೂ ಹುಡುಗಿಯೊಬ್ಬಳನ್ನು ನೋಡಿಲ್ಲವೇನು ? ನಿಮ್ಮ ತಾಯಿ ಅಥವಾ ಸಹೋದರಿ ಕೂಡ ಇಲ್ಲಿರಬಹುದು,’’ ಎಂದಿರುವುದು ವೀಡಿಯೊದಲ್ಲಿ ಕಾಣಿಸಲಾಗಿದೆ.
ಘಟನೆ ಶನಿವಾರ ರಾತ್ರಿ ನಡೆದಿದೆಯೆನ್ನಲಾಗಿದ್ದು ಸಂತ್ರಸ್ತ ಯುವತಿಯನ್ನು ಭದ್ರತಾ ಸಿಬ್ಬಂದಿಗಳು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ನಂತರ ಸಂಗೀತ ಕಾರ್ಯಕ್ರಮ ಮತ್ತೆ ಆರಂಭಗೊಂಡಾಗ ನೆರೆದಿದ್ದ ಜನಸ್ತೋಮ ಹುಚ್ಚೆದ್ದು ‘ಆತಿಫ್, ಆತಿಫ್’ ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಮಹಿಳೆಯೊಬ್ಬಳ ಮಾನ ಹಾಗೂ ಗೌರವವನ್ನು ರಕ್ಷಿಸುವುದಕ್ಕಿಂತ ಮುಖ್ಯ ಕೆಲಸ ಬೇರೊಂದಿಲ್ಲ ಎಂದು ಆತಿಫ್ ಈ ಘಟನೆಯಿಂದ ಸಾಬೀತುಪಡಿಸಿದ್ದಾರೆಂದು ಅವರಿಗೆ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.