ತನ್ನ 'ಅಮ್ಮನೇ' ತನ್ನ ಅಪಹರಣಕಾರ್ತಿ ಎಂದು ಗೊತ್ತಾದಾಗ...
ವಾಷಿಂಗ್ಟನ್, ಜ.14: ಫ್ಲೋರಿಡಾ ಆಸ್ಪತ್ರೆಯಿಂದ ಮಗುವಿದ್ದಾಗ ಕಾಣೆಯಾದವರು 18 ವರ್ಷಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಅತ್ಯಂತ ಅಪರೂಪದ ಘಟನೆ ನಡೆದಿದೆ.
1998ರಲ್ಲಿ ಫ್ಲೋರಿಡಾದ ಆಸ್ಪತ್ರೆಯಲ್ಲಿ 16ರ ಹರೆಯದ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಕೆಲವೇ ಗಂಟೆಯ ಬಳಿಕ ನರ್ಸ್‌ವೊಬ್ಬಳು ತಾಯಿಯ ಬಳಿ ಬಂದು ಮಗುವಿಗೆ ಜ್ವರ ಇದೆಯೇ ಎಂದು ಪರೀಕ್ಷೆ ಮಾಡಿ ಬರುವುದಾಗಿ ಮಗುವನ್ನು ಕರೆದುಕೊಂಡು ಹೋದವಳು ವಾಪಸ್ ಬರಲೇ ಇಲ್ಲ.
ಮಗುವಿನೊಂದಿಗೆ ನರ್ಸ್ ಕಾಣೆಯಾದ ಕೆಲವೇ ನಿಮಿಷದಲ್ಲಿ ಮಗುವಿನ ಅಜ್ಜಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡುವವರನ್ನು ತಡೆ ಹಿಡಿದರು. ಬಸ್ ಹಾಗೂ ರೈಲುಗಳ ಓಡಾಟ ಸ್ಥಗಿತಗೊಳಿಸಿದರು. ಮಗುವಿಗಾಗಿ ಏರ್‌ಪೋರ್ಟ್ ಪೊಲೀಸರು ಎಚ್ಚರಿಕೆ ವಹಿಸಿದ್ದರು. ಮಗುವಿನ ಹುಡುಕಾಟ ಫ್ಲೋರಿಡಾ ಸಹಿತ ಎಲ ್ಲಕಡೆ ಹೊಸ ಸಂಚಲನ ಮೂಡಿಸಿತ್ತು. ಕಾಣೆಯಾದ ಮಗುವಿನ ಫೋಟೊವಿರುವ ಪೋಸ್ಟರ್‌ನ್ನು ಒಂದು ವರ್ಷಗಳ ಕಾಲ ಜಾಕ್ಸನ್‌ವಿಲ್ ನಗರದಲ್ಲಿ ಹಾಕಲಾಗಿದ್ದರೂ ಮಗು ಪತ್ತೆಯಾಗಿರಲಿಲ್ಲ.
ಮಗುವನ್ನು ಪತ್ತೆ ಹಚ್ಚಿದವರಿಗೆ 250,000 ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು. ‘ಅಮೆರಿಕಾದ ಮೋಸ್ಟ್ ವಾಂಟೆಡ್’ ನವಜಾತ ಶಿಶುವನ್ನು ಅಮೆರಿಕದ ನೆರೆಯ ರಾಷ್ಟ್ರಗಳಲ್ಲೂ ಹುಡುಕಿದರೂ ಪತ್ತೆಯಾಗಿರಲಿಲ್ಲ. ತನಿಖಾ ತಂಡ 15 ಮಗುವಿನ ಕಾಲುಗಳ ಅಚ್ಚುಗಳನ್ನು ಪಡೆದಿದ್ದರು. ಇತರ ಎರಡು ಮಗುವಿನ ಡಿಎನ್‌ಎ ಟೆಸ್ಟ್ ನಡೆಸಿದರೂ ಯಾವುದೇ ಹೋಲಿಕೆ ಕಂಡುಬರಲಿಲ್ಲ. ಮಗುವಿನ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ನೋಟಿಸ್‌ನ್ನು ನೀಡಿದ್ದರು. ಈ ಘಟನೆಯ ಬಳಿಕ ಫ್ಲೋರಿಡಾದ ಎಲ್ಲ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
2016ರಲ್ಲಿ ಫ್ಲೋರಿಡಾದ ತನಿಖಾ ತಂಡ ಆಸ್ಪತ್ರೆಯಿಂದ ಕಾಣೆಯಾಗಿದ್ದ ಮಗು ಜನಿಸಿದ ದಿನದಂದೇ ಹುಟ್ಟಿದ್ದ ಯುವತಿಯನ್ನು ಪತ್ತೆ ಹಚ್ಚಿದ್ದರು. ಆದರೆ, ಆ ಯುವತಿಯ ಹೆಸರು ಬೇರೆಯೇ ಆಗಿತ್ತು. ತನಿಖಾ ತಂಡ ಯುವತಿಯ ಗುರುತು ಪತ್ರ ನಕಲಿ ಎಂದು ಪತ್ತೆ ಹಚ್ಚಿದರು. ಸಹಾಯಕ್ಕಾಗಿ ಇತರ ಏಜೆನ್ಸಿಗಳ ನೆರವು ಪಡೆದಿದ್ದರು. ಗೌಪ್ಯತೆ ಕಾಪಾಡುವ ಉದ್ದೇಶದಿಂದ ಕಾಣೆಯಾಗಿದ್ದ ಮಗುವಿನ ಹೊಸ ಹೆಸರನ್ನು ಬಹಿರಂಗಪಡಿಸಲಿಲ್ಲ.
ಇದೀಗ 18ವರ್ಷಗಳ ಬಳಿಕ ಕಾಣೆಯಾಗಿದ್ದ ಹೆಣ್ಣು ಶಿಶು ಪತ್ತೆಯಾಗಿದೆ. ಡಿಎನ್‌ಎ ಟೆಸ್ಟ್‌ನಲ್ಲಿ 18 ವರ್ಷಗಳ ಕಾಣೆಯಾಗಿದ್ದ ಮಗು ಅಪಹರಣಕಾರರ ಬಳಿಯೇ ಇತ್ತು. ಮಗುವಿನ ಹೆಸರನ್ನು ಬದಲಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆರೋಪಿ 51ರ ಪ್ರಾಯದ ಗ್ಲೋರಿಯಾ ವಿಲಿಯಮ್ಸ್‌ರನ್ನು ಕಿಡ್ನಾಪ್ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗುತ್ತಿದೆ. ಕಾಣೆಯಾಗಿದ್ದ ಮಗು ವಿಲಿಯಮ್ಸ್ ತನ್ನ ತಾಯಿಯೆಂದು ಭಾವಿಸಿತ್ತು.
‘‘ಇಂತಹ ಪ್ರಕರಣವನ್ನು ದೇಶದಲ್ಲಿ ನೋಡದೇ ತುಂಬಾ ಸಮಯವಾಗಿದೆ ಎಂದು ಜಾಕ್ಸನ್‌ವಿಲ್ಲೆ ಶೆರಿಫ್ ಮೈಕ್ ವಿಲಿಯಮ್ಸ್ ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ.