ಅಖಿಲೇಶ್ ವಿರುದ್ಧ ನಾನೇ ಸ್ಪರ್ಧಿಸಬಹುದು: ಮುಲಾಯಂ
ಲಕ್ನೋ,ಜ.16: ಉತ್ತರ ಪ್ರದೇಶವನ್ನಾಳುತ್ತಿರುವ ಕುಟುಂಬದಲ್ಲಿ ಪರಮಾಧಿಕಾರಕ್ಕಾಗಿ ನಡೆಯುತ್ತಿರುವ ಹಣಾಹಣಿಯ ನಡುವೆಯೇ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ ಅವರಿಂದು, ಮುಖ್ಯಮಂತ್ರಿ ಅಖಿಲೇಶ್ ಯಾದವ ಮುಸ್ಲಿಮರ ಬಗ್ಗೆ ನಕಾರಾತ್ಮಕ ನಿಲುವು ಹೊಂದಿದ್ದಾರೆಂದು ಆರೋಪಿಸಿದರು. ಪುತ್ರ ಅಖಿಲೇಶ್ ತನ್ನ ಸಲಹೆಗೆ ಕಿವಿಗೊಡದಿದ್ದರೆ ಚುನಾವಣೆಯಲ್ಲಿ ಅವರ ವಿರುದ್ಧ ತಾನೇ ಸ್ಪರ್ಧಿಸುವುದಾಗಿ ಹೇಳಿದರು.
ಇಲ್ಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಅಖಿಲೇಶ್ ವಿರುದ್ಧ ತೀವ್ರ ದಾಳಿ ನಡೆಸಿದರು. ತಾನು ಸದಾ ಮುಸ್ಲಿಮರ ಹಿತಾಸಕ್ತಿಗಳನ್ನು ಪ್ರತಿಪಾದಿಸುತ್ತ ಬಂದಿದ್ದೇನೆ. ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿ ಮುಸ್ಲಿಮ್ ವ್ಯಕ್ತಿಯೋರ್ವರು ನೇಮಕಗೊಳ್ಳುವಂತೆ ತಾನು ನೋಡಿಕೊಂಡಿದ್ದೆ. ಇದಕ್ಕಾಗಿ ಅಖಿಲೇಶ್ 15 ದಿನಗಳ ಕಾಲ ತನ್ನೊಂದಿಗೆ ಮಾತನಾಡಿರಲಿಲ್ಲ. ಅವರು ಈ ಹುದ್ದೆಯಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಇಷ್ಟಪಟ್ಟಿರಲಿಲ್ಲ. ಅದು ಮುಸ್ಲಿಮ್ ವಿರೋಧಿ ಸಂದೇಶವನ್ನು ರವಾನಿಸಿತ್ತು ಎಂದು ಅವರು ಆರೋಪಿಸಿದರು.
ಅಖಿಲೇಶ್ ಮುಸ್ಲಿಮರ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಹೊಂದಿದ್ದಾರೆ. ಬಿಜೆಪಿ ನಿರ್ದೇಶದಂತೆ ಕಾರ್ಯಾಚರಿಸುತ್ತಿರುವ ರಾಮಗೋಪಾಲ್ ಯಾದವ ಅವರು ಅಖಿಲೇಶ್‌ರನ್ನು ಆಡಿಸುತ್ತಿದ್ದಾರೆ ಎಂದೂ ಮುಲಾಯಂ ಆಪಾದಿಸಿದರು.
ತಾನು ಮುಸ್ಲಿಮರಿಗಾಗಿ ಬದುಕುತ್ತೇನೆ ಮತ್ತು ಮುಸ್ಲಿಮರ ಹಿತಾಸಕ್ತಿಯ ಪ್ರಶ್ನೆ ಎದುರಾದಾಗ ತಾನು ಅಖಿಲೇಶ್ ವಿರುದ್ಧವೂ ಹೋರಾಡುತ್ತೇನೆ ಎಂದರು.
ಪಕ್ಷವನ್ನು ಕಟ್ಟಲು ತಾನು ಬಹಳಷ್ಟು ತ್ಯಾಗಗಳನ್ನು ಮಾಡಿದ್ದೇನೆ. ಅಖಿಲೇಶ್ ತನ್ನ ಮಾತುಗಳನ್ನು ಕೇಳುತ್ತಿಲ್ಲ. ಮಹಿಳೆ ಸೇರಿದಂತೆ ಹಲವಾರು ಸಚಿವರನ್ನು ಅವರು ವಜಾ ಮಾಡಿದ್ದಾರೆ. ಹಿರಿಯ ಸಚಿವರನ್ನು ಯಾವುದೇ ಕಾರಣವಿಲ್ಲದೆ ಕಿತ್ತುಹಾಕಲಾಗಿದೆ ಎಂದು ಮುಲಾಯಂ ಕಿಡಿ ಕಾರಿದರು.