‘‘ಪೆಂಟಗನ್ ಕೂಡ ಹ್ಯಾಕರ್‌ಗಳ ದಾಳಿಗೆ ಗುರಿಯಾಗಿತ್ತು’’: ಡಿಜಿಟಲ್ ಪಾವತಿಯ ಭದ್ರತೆ ಕುರಿತು ಸಚಿವ ಗೋಯಲ್ ಪ್ರತಿಕ್ರಿಯೆ
ಹೊಸದಿಲ್ಲಿ,ಜ.16: ಪೆಂಟಗನ್ ಕೂಡ ಹ್ಯಾಕರ್‌ಗಳ ದಾಳಿಗೆ ಸಿಲುಕಿತ್ತು. ಹಾಗೆಂದು ಅಮೆರಿಕದ ಅಧಿಕಾರ ಕೇಂದ್ರವಾಗಿರುವ ಅದನ್ನು ಮುಚ್ಚಲಾಗಿದೆಯೇ? ಇಂತಹ ಸಂಗತಿಗಳು ನಡೆಯುತ್ತಲೇ ಇರುತ್ತವೆ ಮತ್ತು ನಾವು ಹ್ಯಾಕರ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕಾಗಿದೆ. ಅಮೆರಿಕ ಮತ್ತು ಇತರ ಶ್ರೀಮಂತ ರಾಷ್ಟ್ರಗಳಂತೆ ನಾವು ಸೈಬರ್ ಉಲ್ಲಂಘನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಲೇ ಮುಂದೆ ಸಾಗಬೇಕಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಡಿಜಿಟಲ್ ವಹಿವಾಟು ಕುರಿತ ಕಳವಳಗಳಿಗೆ ಪ್ರತಿಕ್ರಿಯಿ ಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ ನೂತನ ಮೊಬೈಲ್ ಫೋನ್ ಪಾವತಿ ಆ್ಯಪ್ ‘ಭೀಮ್ ’ ಗೆ ಚಾಲನೆ ನೀಡಿದ ಬೆನ್ನಲ್ಲೇ ಅದರ ಹಲವಾರು ತದ್ರೂಪಿ ಆ್ಯಪ್‌ಗಳು ಆ್ಯಂಡ್ರಾಯ್ಡಾ ಸ್ಮಾರ್ಟ್‌ಫೋನ್ ಸ್ಟೋರ್‌ಗಳಲ್ಲಿ ಪ್ರತ್ಯಕ್ಷಗೊಂಡಿದ್ದವು. ಮೊದಲ ಕೆಲವು ದಿನಗಳಲ್ಲಿ ಬಳಕೆದಾರರಿಗೆ ಹಣಕ್ಕಾಗಿ ಅನಪೇಕ್ಷಿತ ಮನವಿಗಳ ಮಹಾಪೂರವೇ ಹರಿದುಬಂದಿತ್ತು.
ಕಳೆದ ವರ್ಷದ ನ.8ರಂದು ಮೋದಿ ಸರಕಾರದ ನೋಟು ರದ್ದತಿ ಕ್ರಮದ ಬಳಿಕ ದೇಶದಲ್ಲಿ ನಗದು ಹಣದ ಕೊರತೆಯುಂಟಾದಾಗ ಡಿಜಿಟಲ್ ಹಣಪಾವತಿಯನ್ನು ಜನಪ್ರಿಯಗೊಳಿಸಲು ಮುಂದಾದ ಕೇಂದ್ರವು ಅದನ್ನು ಸುಗಮವಾಗಿಸಲು ಭೀಮ್ ಆ್ಯಪ್ ಅನ್ನು ಬಿಡುಗಡೆಗೊಳಿಸಿತ್ತು. ಕೇವಲ ಹತ್ತೇ ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ಜನರು ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆದರೆ ಮಾಹಿತಿ ತಂತ್ರಜ್ಞಾನದ ಅರಿವು, ಖಾಸಗಿತನದ ನಿಯಂತ್ರಣ, ದತ್ತಾಂಶ ರಕ್ಷಣೆ ಮತ್ತು ಡಿಜಿಟಲ್ ಭದ್ರತೆಗಳು ತೀರ ಕಳಪೆಯಾಗಿರುವ ಭಾರತ ದೇಶದಲ್ಲಿ ಸೈಬರ್ ದಾಳಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ವ್ಯಾಪಕ ಭದ್ರತಾ ಪರೀಕ್ಷೆಗಳು ಮತ್ತು ಡಿಜಿಟಲ್ ಬಳಕೆಯ ಕುರಿತು ಶಿಕ್ಷಣದ ಅಗತ್ಯವನ್ನು ಕಡೆಗಣಿಸಿ ನಾವು ರಾಶಿ ರಾಶಿ ಹಣಕಾಸು ಆ್ಯಪ್‌ಗಳ ಬಿಡುಗಡೆ ಮತ್ತು ಬಳಕೆಯ ಹಿಂದೆ ಬಿದ್ದಿದ್ದೇವೆ. ಯಾವುದೇ ನಿಯಂತ್ರಣ ವ್ಯವಸ್ಥೆಯೇ ಇಲ್ಲದ ಡಿಜಿಟಲ್ ಲೋಕದಲ್ಲಿ ನಾವಿದ್ದೇವೆ ಎನ್ನುತ್ತಾರೆ ಸೆಂಟರ್ ಫಾರ್ ಇಂಟರ್‌ನೆಟ್ ಆ್ಯಂಡ್ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಅಬ್ರಹಾಂ.
ಶೇ.80ರಷ್ಟು ವಹಿವಾಟುಗಳು ನಗದು ರೂಪದಲ್ಲಿಯೇ ನಡೆಯುವ ದೇಶದಲ್ಲಿ ನೋಟು ರದ್ದತಿ ಕ್ರಮವು ಸಂಕಷ್ಟಗಳನ್ನು ತಂದಿಟ್ಟ ಬಳಿಕ ಮೋದಿ ಡಿಜಿಟಲ್ ವಹಿವಾಟುಗಳಿಗೆ ಒತ್ತು ನೀಡಲು ಹಲವಾರು ಕ್ರಮಗಳನ್ನು ಪ್ರಕಟಿಸಿದರು. ಇಂತಹ ಡಿಜಿಟಲ್ ವಹಿವಾಟುಗಳಿಗೆ ಲಭ್ಯವಿರುವ ಹಲವಾರು ಆ್ಯಪ್‌ಗಳ ಪೈಕಿ ಭೀಮ್ ಕೂಡ ಒಂದು,ಅಷ್ಟೇ. ಆದರೆ ಜನರು ಡಿಜಿಟಲ್ ವಹಿವಾಟುಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಭರದಲ್ಲಿ ಭದ್ರತಾ ಕಳವಳಗಳನ್ನು ನಿರ್ಲಕ್ಷಿಲಾಗುತ್ತಿದೆ.
ಹೊಸ ಪೇಮೆಂಟ್ ಆ್ಯಪ್‌ಗಳು ಮತ್ತು ಇ-ವ್ಯಾಲೆಟ್ ಕಂಪನಿಗಳು ಇಂದಿನ ದಿನಗಳಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವ, 2008ರಷ್ಟು ಹಳೆಯದಾದ ಅದೇ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಆರ್‌ಬಿಐ ಮಾರ್ಗಸೂಚಿಗಳಿಗೆ ಒಳಪಟ್ಟಿವೆ.
ರಾತ್ರಿ ಬೆಳಗಾಗುವುದರೊಳಗೆ ನಾಯಿಕೊಡೆಗಳಂತೆ ತಲೆಯೆತ್ತಿರುವ ಈ ಹೊಸ ಮೊಬೈಲ್ ಪಾವತಿ ಆ್ಯಪ್‌ಗಳನ್ನು ಹದ್ದುಬಸ್ತಿಬಲ್ಲಿಡುವ ಹೊಸ ಡಿಜಿಟಲ್ ಪಾವತಿ ಕಾನೂನು ಭಾರತದ ಈಗಿನ ತುರ್ತು ಅಗತ್ಯವಾಗಿದೆ ಎನ್ನುತ್ತಾರೆ ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್.
ಭದ್ರತಾ ತಪಾಸಣೆಗಳನ್ನು ಕೈಗೊಳ್ಳುವಂತೆ ಆರ್‌ಬಿಐ ಇತ್ತೀಚಿಗೆ ಪೇಮೆಂಟ್ ಬ್ಯಾಂಕುಗಳಿಗೆ ನಿರ್ದೇಶವನ್ನು ನಿಡಿದೆ. ಆದರೆ ಇದನ್ನು ಅವು ಪಾಲಿಸದಿದ್ದಲ್ಲಿ ಅವುಗಳಿಗೆ ದಂಡವೂ ಇಲ್ಲ, ದಂಡನೆಯೂ ಇಲ್ಲ. ಹೀಗಿರುವಾಗ ವಂಚಕರು ನನ್ನ ಹಣವನ್ನು ಎಗರಿಸಿದರೆ ಕಂಬದಿಂದ ಕಂಬಕ್ಕೆ ಸುತ್ತುವುದೇ ನನ್ನ ಕೆಲಸವಾಗುತ್ತದೆ ಎಂದು ದುಗ್ಗಲ್ ಹೇಳಿದರು.
ಭಾರತದ ಸಣ್ಣ ಪಟ್ಟಣಗಳಲ್ಲಿ ಮತ್ತು ಗ್ರಾಮಗಳಲ್ಲಿ ಆನ್‌ಲೈನ್ ಅಪಾಯದ ಕುರಿತು ಅರಿವು ಅಷ್ಟಾಗಿಲ್ಲ ಎಂಬ ಕಟುಸತ್ಯ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. 2016ರಲ್ಲಿ ದೇಶದಲ್ಲಿ 39,000ಕ್ಕೂ ಅಧಿಕ ಸೈಬರ್ ದಾಳಿಗಳು ನಡೆದಿವೆ. ಇಲ್ಲಿ ಆನ್‌ಲೈನ್ ಖಾಸಗಿತನ ಕುರಿತಂತೆ ಯಾವುದೇ ಕಾನೂನು ಕೂಡ ಇಲ್ಲ.
ಜಾಗತಿಕ ಹ್ಯಾಕರ್‌ಗಳ ಗಮನ ಈಗ ಭಾರತದ ಮೇಲೆ ಕೇಂದ್ರೀಕೃತವಾಗಿದೆ. ಈ ಸೈಬರ್ ಅಪಾಯವು ಡಿಜಿಟಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರ ನೇರ ಪರಿಣಾಮವಾಗಿದೆ ಎನ್ನುತ್ತಾರೆ ಸರಕಾರದ ಭೀಮ್ ಆ್ಯಪ್‌ನ ಭದ್ರತಾ ತಪಾಸಣೆಯನ್ನು ನಡೆಸಿದ್ದ ಲುಸಿಡಿಯಸ್ ಟೆಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಕೇತ್ ಮೋದಿ.