×
Ad

ನೋಟು ರದ್ದತಿಯಿಂದ ಮಂದವಾಗಿರುವ ಆರ್ಥಿಕತೆ ಯಾವಾಗ ಮತ್ತೆ ಹಳಿಗೆ ಬರುತ್ತದೆ?

Update: 2017-01-16 23:56 IST

ಹೊಸದಿಲ್ಲಿ, ಜ16: ನೋಟು ಅಮಾನ್ಯೀಕರಣ ದಿಂದಾಗಿ ಸಮಸ್ಯೆ ಎದುರಿಸುತ್ತಿರುವ ಭಾರತದ ಆರ್ಥಿಕತೆ ಜೂನ್ 2017ರ ಹೊತ್ತಿಗೆ ಮತ್ತೆ ಸಾಮಾನ್ಯಗೊಳ್ಳಲಿದೆಯೆಂದು ಕೇಂದ್ರ ಹೇಳಿದೆ. ಈಗಾಗಲೇ 10 ಲಕ್ಷ ಕೋಟಿ ರೂ. ಚಲಾವಣೆಯಲ್ಲಿದ್ದು ಪ್ರತಿ ದಿನ ಬ್ಯಾಂಕುಗಳಲ್ಲಿ ಠೇವಣಿಯಿಡ ಲಾಗುತ್ತಿರುವಷ್ಟೇ ಮೊತ್ತವನ್ನು ಹಿಂಪಡೆ ಯಲಾಗುತ್ತಿರುವುದರಿಂದ ಆಶಾವಾದ ಮೂಡಿದೆ ಎಂದು ಸರಕಾರ ಹೇಳಿಕೊಂಡಿದೆ.

ಈ ಹಿಂದೆ ಶೇ.50ರಷ್ಟು ವ್ಯವಹಾರಗಳ ಬಗ್ಗೆ ಲೆಕ್ಕ ನೀಡದೇ ಇರುತ್ತಿದ್ದ ಸಣ್ಣ, ಅತಿ ಸಣ್ಣ, ಮಧ್ಯಮ ಉದ್ದಿಮೆಗಳು, ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತು ಸಣ್ಣ ವರ್ತಕರು ಜೂನ್ ತಿಂಗಳೊಳಗೆ ದೇಶದ ಅಭಿವೃದ್ಧಿ ಪಥದಲ್ಲಿ ಜೊತೆಯಾಗಿ ಸಾಗುತ್ತಾರೆಂಬ ಭರವಸೆಯಿದೆ ಎಂದು ಕೇಂದ್ರ ಸರಕಾರದ ನೋಟು ರದ್ದತಿಯ ಜಾರಿ ಕುರಿತ ಜವಾಬ್ದಾರಿ ಹೊಂದಿದ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೊಡ್ಡ ಮುಖಬೆಲೆಯ ಸುಮಾರು ರೂ. 75,000 ಕೋಟಿಯಷ್ಟು ಹಣವು ಅಕ್ರಮವಾಗಿ ಉಳಿಯಲಿದೆ. ದೇಶದಲ್ಲಿ ನೋಟು ಅಮಾನ್ಯಕ್ಕಿಂತ ಮೊದಲು ಚಲಾವಣೆಯಲ್ಲಿದ್ದ ರೂ. 15.60 ಲಕ್ಷ ಕೋಟಿಯಲ್ಲಿ ಸುಮಾರು ರೂ. 14 ಲಕ್ಷ ಕೋಟಿ ಹಿಂದೆ ಬಂದಿದೆಯೆಂದೂ ಈ ಅಧಿಕಾರಿ ತಿಳಿಸಿದ್ದಾರೆ.
ನೋಟು ಅಮಾನ್ಯ ಘೋಷಣೆಯಾದ ನಂತರದ ನಾಲ್ಕು ದಿನಗಳಲ್ಲಿನ ಗೊಂದಲದಿಂದಾಗಿ ನೇಪಾಳ ಮತ್ತು ಭೂತಾನ್‌ನಿಂದ ಬಂದ ದೊಡ್ಡ ಮುಖಬೆಲೆಯ ನೋಟುಗಳ ಹೊರತಾಗಿ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಯಿಡಲಾದ ರೂ. 11,000ರಿಂದ ರೂ. 12,000 ಕೋಟಿ ಹಣದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲವೆಂದು ಅಧಿಕಾರಿ ಹೇಳಿದ್ದಾರೆ.
 ನೋಟುಗಳನ್ನು ಲೆಕ್ಕಗೊಳಿಸುವ, ನಕಲಿ ನೋಟುಗಳನ್ನು ಪ್ರತ್ಯೇಕಿಸುವ ಮೆಶೀನುಗಳು ರಿಸರ್ವ್ ಬ್ಯಾಂಕ್ ಬಳಿ ಕೇವಲ 60 ಲಭ್ಯವಿರುವುದರಿಂದ ಬ್ಯಾಂಕುಗಳಿಗೆ ಹಿಂದಿರುಗಿಸಲಾದ ಹಣವನ್ನು ಲೆಕ್ಕ ಮಾಡಲು ದಿನವೊಂದಕ್ಕೆ 12 ಗಂಟೆಗಳಂತೆ ರಿಸರ್ವ್ ಬ್ಯಾಂಕಿಗೆ 600 ದಿನಗಳು ಬೇಕಾಗಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಹಣ ಹಿಂಪಡೆಯುವುದಕ್ಕಾಗಿ ಇರುವ ಮಿತಿಯನ್ನು ಪರಿಸ್ಥಿತಿ ಸುಧಾರಿಸಿದ ಕೂಡಲೇ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆಯಬಹುದೆಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News