ಕೈಗಾರಿಕೆ ವಿಸ್ತರಣಾ ಭೂ ಸ್ವಾಧೀನ ಕ್ರಮ: ಖಂಡನೆ

Update: 2017-01-16 18:38 GMT

ಮಂಗಳೂರು, ಜ.16: ರಾಜ್ಯ ಸರಕಾರವು ಎಂಆರ್‌ಪಿಎಲ್ ಕಂಪೆನಿಯ 4ನೆ ಹಂತದ ವಿಸ್ತರಣೆಗಾಗಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಗ್ರಾಮಗಳ ಸುಮಾರು 1,011 ಎಕರೆಯಷ್ಟು ಫಲವತ್ತಾದ ಭೂಮಿಯನ್ನು ಗ್ರಾಮಸ್ಥರ ವಿರೋಧದ ನಡುವೆಯೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಖಂಡಿಸುತ್ತದೆ ಎಂದು ಸಮಿತಿಯ ಅಧ್ಯಕ್ಷ ಮಧುಕರ್ ಅಮೀನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2015ರ ನವೆಂಬರ್‌ನ ಅಧಿಸೂಚನೆಗಿಂತ ಮೊದಲೇ ಈ ಗ್ರಾಮಗಳಲ್ಲಿ ಭೂ ಸ್ವಾಧೀನತೆಯ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ತಿಳಿದು ಗ್ರಾಮಸ್ಥರು ಸರಕಾರಕ್ಕೆ ವೈಯಕ್ತಿಕವಾಗಿ ಲಿಖಿತ ಆಕ್ಷೇಪಗಳನ್ನು ಸಲ್ಲಿಸಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಎಂಆರ್‌ಪಿಎಲ್ ಕಂಪೆನಿಯು ಸರಕಾರ ಮತ್ತು ಕೆಐಎಡಿಬಿಯನ್ನು ಬಳಸಿಕೊಂಡು ಬಡ ಕೃಷಿಕರನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸಿ, ಅವರ ಭೂಮಿಯನ್ನು ಕಬಳಿಸಲು ಹೊರಟಿದೆ. ಸ್ವಂತ ನೀರಾವರಿ ವ್ಯವಸ್ಥೆ ಹೊಂದಿರುವ ಫಲವತ್ತಾದ ಕೃಷಿ ಭೂಮಿಯನ್ನು ಭಾರೀ ಪರಿಸರ ಮಾಲಿನ್ಯಗೊಳಿಸುವ ಉದ್ಯಮಕ್ಕೆ ಬಲಿ ಕೊಡಬೇಕೇ? ಎಂದು ಪ್ರಶ್ನಿಸಿದ ಮಧುಕರ ಅಮೀನ್, ಭೂಸ್ವಾಧೀನತೆಯನ್ನು ವಿರೋಧಿಸುವ ಹೆಚ್ಚಿನಭೂಮಾಲಕರು, ಕಾರ್ಯಕರ್ತರ ಮೇಲೆ ಕಂಪೆನಿ ನ್ಯಾಯಾಲಯಗಳಲ್ಲಿ ಕೇವಿಯಟ್ ಹಾಕಿರುವುದು ಸರಿಯಲ್ಲ ಎಂದರು.

ಸರಕಾರವು 2016ರಲ್ಲಿ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಪ್ರಸ್ತುತ ಚಾಲ್ತಿಯಲ್ಲಿರಬೇಕಿದ್ದ ಎಲ್‌ಎಆರ್‌ಆರ್ ಕಾಯ್ದೆ 2013 ಹಾಗೂ 2015ರ ಕಾನೂನಿಗಿಂತ ಭಿನ್ನವಾಗಿದೆ. ಇದು 1966ರ ಕೆಐಎಡಿಬಿ ಕಾಯ್ದೆಯಂತಿದೆ. ಭೂಮಾಲಕರನ್ನು ವಂಚಿಸುವಲ್ಲಿ ಕೆಐಎಡಿಬಿಯು ಎಂಆರ್‌ಪಿಎಲ್ ಕಂಪೆನಿಯೊಂದಿಗೆ ಶಾಮೀಲಾಗಿದೆ ಎಂದವರು ಆರೋಪಿಸಿದರು.

ಎಂಆರ್‌ಪಿಎಲ್ ಕಂಪೆನಿಯ ಉದ್ಯೋಗ ಸೃಷ್ಟಿಯು ಸುಳ್ಳಿನ ಕಂತೆ ಎಂಬುದು ಈಗ ಬಯಲಾಗಿದೆ. ಎಂಆರ್‌ಪಿಎಲ್/ಎಂಎಸ್‌ಇಝೆಡ್ ಕಂಪೆನಿ ವಿಸ್ತರಣೆಯು ಸುತ್ತಲಿನ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿದೆ. ಸರಕಾರ ಮತ್ತು ಜನಪ್ರತಿನಿಧಿಗಳು ಭೂ ಸ್ವಾಧೀನತಾ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ವಿಲಿಯಂ ಡಿಸೋಜ, ಹೇಮಲತಾ ಭಟ್, ಕಾರ್ಯದರ್ಶಿ ಲೋರೆನ್ಸ್ ಡಿಕುನ್ಹ, ಸದಸ್ಯ ಜಾನ್ ಪಿಂಟೊ, ಕೋಶಾಧಿಕಾರಿ ವೇದವ್ಯಾಸ, ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News