ಪಂಕಜಕಸ್ತೂರಿಯ ವಂಚಕ ಜಾಹೀರಾತು ಮತ್ತು ಎರಡು ಮಕ್ಕಳ ನಕಲಿ ಅಪ್ಪ!

Update: 2017-01-17 04:23 GMT

ಜಾಹಿರಾತುಗಳ ದಗಲ್ಬಾಜಿಗೆ ಸಣ್ಣ ಉದಾಹರಣೆ ಇಲ್ಲಿದೆ ನೋಡಿ. ಜಾಹಿರಾತುಗಳು ಸುಳ್ಳು ಅಂತ ಗೊತ್ತಿತ್ತು. ಆದರೆ, ಈ ಪರಿ ಸುಳ್ಳು ಅಂತ ಅನಿಸಿರಲಿಲ್ಲ. ಯಪ್ಪಾ...

ಜಾಹಿರಾತಿನಲ್ಲಿರುವ ನಾರಾಯಣಭಟ್ ನನಗೆ ಹಳೆಯ ಪರಿಚಿತರು. ನಾನು ಹಿಂದೆ ನಾಟಕಗಳಲ್ಲಿ ಅಭಿನಯಿಸುವಾಗ ಮತ್ತು ವಾರ್ತಾಭಾರತಿಯಲ್ಲಿ ನಾಟಕಗಳ ವಿಮರ್ಶೆಯಂಥದ್ದನ್ನು ಬರೆಯುತ್ತಿದ್ದಾಗ ಹಲವಾರು ಸಲ ಇವರ ನಾಟಕಗಳನ್ನು ನೋಡಿ ಮೆಚ್ಚಿಕೊಂಡಿದ್ದೇನೆ. ನಂತರ ನಾರಾಯಣಭಟ್ ಜಾದು ಕ್ಷೇತ್ರ ಪ್ರವೇಶಿಸಿದಾಗ ಅವರ ನಾಟಕಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದರು. ಇಷ್ಟು ದಿನ ಒಂಟಿಯಾಗಿದ್ದ ಅವರು ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ.

ಇದೆಲ್ಲ ಇರಲಿ, ಈ ಜಾಹಿರಾತು ನೋಡಿ ಗಾಬರಿಗೊಳ್ಳಲು ಕಾರಣವೆಂದರೆ ಇತ್ತೀಚೆಗಷ್ಟೆ ಮದುವೆಯಾಗಿರುವ ನಮ್ಮ ನಾರಾಯಣಭಟ್ಟರಿಗೆ ಶಾಲೆಗೆ ಹೋಗುವಷ್ಟು ವಯಸ್ಸಾಗಿರುವ ಎರಡು ಮಕ್ಕಳಿರುವುದು ಹೇಗೆ ಸಾಧ್ಯ. ಭಟ್ಟರು ಆಟೋ ಓಡಿಸುವುದನ್ನು ಯಾವಾಗ ಶುರು ಹಚ್ಚಿಕೊಂಡರು ಎಂಬುದೇ ಯಕ್ಷ ಪ್ರಶ್ನೆ ಕಾಡತೊಡಗಿತು.ಗೊತ್ತಿರುವ ಗೆಳೆಯರನ್ನು ವಿಚಾರಿಸಿದ ಮೇಲೆ "ಏ ಅದು ಸುಳ್ಳು ಸುಳ್ಳೆ ಜಾಹಿರಾತು" ಎಂದರು.

"ನನಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಉಸಿರಾಟದ ತೊಂದರೆ ಇರುವ ಅವರಿಗೆ ಈ ಪಂಕಜ ಕಸ್ತೂರಿಯ ಔಷಧಿ ಕುಡಿಸಿದ ನಂತರ ಸಂಪೂರ್ಣ ವಾಸಿಯಾಯಿತಂತೆ" (ಈ ಕನ್ನಡದಲ್ಲಿರುವ ಜಾಹೀರಾತನ್ನು ಒಮ್ಮೆ ಓದಿ. ನಿಮ್ಮ ನಾಲಿಗೆ ಸ್ವಚ್ಚವಾಗುವುದು ಖಂಡಿತ.)

ಈ ಜಾಹಿರಾತಿನಲ್ಲಿ ಹೇಳಿಕೊಂಡಿದ್ದಷ್ಟೆ ಅಲ್ಲದೇ ಈ ಜಾಹಿರಾತನ್ನು ತಮ್ಮ ವಾಲ್ ಮೇಲೆ ಈ ಮಾಹಾನುಭಾವರು ಹಂಚಿಕೊಂಡಿದ್ದಾರೆ. 
ಇದರಲ್ಲಿ ಯಾರದು ತಪ್ಪು, ಪ್ರಕಟಿಸುವ ಕಂಪನಿಯದ್ದಾ, ನಟರದ್ದಾ, ಪ್ರಕಟಿಸುವ ಪತ್ರಿಕೆಗಳದ್ದಾ, ಕೊಳ್ಳುವ ಗ್ರಾಹಕರದ್ದಾ? ಇವರೊಳಗಿನ ಆತ್ಮ ಇಂಥದ್ದನ್ನೆಲ್ಲಾ ಪ್ರಶ್ನಿಸುವ ಗೂಜಿಗೆ ಹೋಗದೇ ನಿಷ್ಕ್ರೀಯಗೊಂಡಿದೆಯೇ? 

ಯಪ್ಪಾ... ಗುಣಮುಖರಾಗಿರುವ ಅಸಲಿ ಗ್ರಾಹಕರನ್ನೇ ಮಾತಾಡಿಸಿ ಜಾಹಿರಾತು ಪ್ರಕಟಿಸಲು ಈ ಕಂಪೆನಿಗಳಿಗೆ ಏನು ದಾಡಿ? ಅಥವಾ ಅದರಲ್ಲಿರುವ ಔಷಧಿಯೇ ನಕಲಿಯೇ? ಇಂಥದಕ್ಕೆಲ್ಲ ಶಿಕ್ಷೆಯೇ ಇಲ್ಲವೇ, ದುಡ್ಡು ಖರ್ಚು ಮಾಡಿ ಜಾಹಿರಾತು ನೀಡಿದರೆ ಅದು ಕಾನೂನುಬದ್ಧವಾಗಿ ಬಿಡುತ್ತದೆಯೇ? 
ಆದರೂ ಕೊಳ್ಳೊಣ. ಕಂಪೆನಿಗಳನ್ನು ಆರ್ಥಿಕವಾಗಿ ಸದೃಡಗೊಳಿಸೋಣ.

Writer - ಹನಮಂತ ಹಲಿಗೆರಿ

contributor

Editor - ಹನಮಂತ ಹಲಿಗೆರಿ

contributor

Similar News