×
Ad

ಧರ್ಮದ ಕಾರಣದಿಂದ ಕೊಲೆ ಮಾಡಿರಬಹುದು ಎಂದು ಆರೋಪಿಗಳಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್ !

Update: 2017-01-17 10:56 IST

ಮುಂಬೈ, ಜ.17: ಜೂನ್ 2014ರಲ್ಲಿ ಪುಣೆಯಲ್ಲಿ ನಡೆದ ಮೊಹ್ಸಿನ್ ಶೇಖ್ (28) ಕೊಲೆ ಪ್ರಕರಣದ21 ಮಂದಿ ಆರೋಪಿಗಳಲ್ಲಿ ಮೂರು ಮಂದಿಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿರುವುದು ಮೃತನ ಕುಟುಂಬದವರಿಗೆ ಆಘಾತ ತಂದಿದೆ. ಶೇಖ್ ನನ್ನು ಹಿಂದೂ ರಾಷ್ಟ್ರ ಸೇನಾ ಕಾರ್ಯಕರ್ತರು ಕೊಲೆಗೈದಿದ್ದಾರೆಂದು ಆರೋಪಿಸಲಾಗಿತ್ತು.

‘‘ಮೃತಪಟ್ಟವನ ಒಂದೇ ತಪ್ಪೆಂದರೆ ಆತ ಬೇರೆ ಧರ್ಮಕ್ಕೆ ಸೇರಿದವನಾಗಿದ್ದ. ಅಂತೆಯೇ ಅರ್ಜಿದಾರರು/ಆರೋಪಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಅವರನ್ನು ಪ್ರಚೋದಿಸಿ ಅವರನ್ನು ಈ ಕೃತ್ಯ ನಡೆಸುವಂತೆ ಪ್ರೇರೇಪಿಸಿರಬಹುದು,’’ ಎಂದು ಆರೋಪಿಗಳಿಗೆ ಜಾಮೀನು ನೀಡಿಕೆ ಸಂದರ್ಭದಲ್ಲಿ ನ್ಯಾಯಾಧೀಶೆ ಮೃದುಲಾ ಭಟ್ಕರ್ ಹೇಳಿದ್ದರು.

‘‘ಆರೋಪಿಗಳು ಘಟನೆಗಿಂತ ಮೊದಲು ಸಭೆಯೊಂದರಲ್ಲಿ ಭಾಗವಹಿಸಿದ್ದರು ಹಾಗೂ ಅವರಿಗೆ ಮೊಹ್ಸಿನ್ ವಿರುದ್ಧ ಬೇರೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲವೆಂದು ತಿಳಿಯುತ್ತದೆ,’’ ಎಂದೂ ಮೃದುಲಾ ತಿಳಿಸಿದ್ದರು.

ಇದೀಗ ಕೊಲೆಗೀಡಾದ ಮೊಹ್ಸಿನ್ ನ ಕುಟುಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟುವ ಬಗ್ಗೆ ಯೋಚಿಸುತ್ತಿದೆ. ಮೊಹ್ಸಿನ್ ಕೊಲೆ ಪ್ರಕರಣದ ಒಟ್ಟು 21 ಆರೋಪಿಗಳಲ್ಲಿ ಇಲ್ಲಿಯ ತನಕ 14 ಮಂದಿಗೆ ಜಾಮೀನು ದೊರೆತಿದೆ. ಇದೀಗ ಮೂವರಿಗೆ ದೊರೆತ ಜಾಮೀನನ್ನು ವಿರುದ್ಧ ಮಹಾರಾಷ್ಟ್ರ ಸರಕಾರ ಕೂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ  ಹೋಗುವ ಸಾಧ್ಯತೆ ಇದೆ.

ಪುಣೆಯ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಮೊಹ್ಸಿನ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಜೂನ್ 2, 2014ರಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದಾಳಿಗೊಳಗಾಗಿದ್ದ. ಈ ವೇಳೆ ಆತನ ಗೆಳೆಯ ರಿಯಾಝ್ ಅಹ್ಮದ್ ಮುಬಾರಕ್ ಶೆಂಡುರೆ ಕೂಡ ಆತನ ಜತೆಗಿದ್ದ.

ಛತ್ರಪತಿ ಶಿವಾಜಿ ಹಾಗೂ ಬಾಳ್ ಠಾಕ್ರೆಯವರ ಅವಮಾನಕಾರಿ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ರಾಷ್ಟ್ರ ಸೇನಾ ಕಾರ್ಯಕರ್ತರು ಅವರಿಬ್ಬರ ಮೇಲೆ ದಾಳಿ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News