ಎಂಎಚ್ 370 - ವಿಶ್ವದ ಅತಿ ದೊಡ್ಡ ವೈಮಾನಿಕ ನಿಗೂಢ
ಸಿಡ್ನಿ, ಜ.17: ನಾಪತ್ತೆಯಾದ ಮಲೇಷ್ಯಾ ಏರ್ ಲೈನ್ಸ್ ಸಂಸ್ಥೆಯ ಎಂ ಎಚ್ 370 ವಿಮಾನಕ್ಕಾಗಿ ಬರೋಬ್ಬರಿ ಮೂರು ವರ್ಷಗಳ ಸತತ ಪತ್ತೆ ಕಾರ್ಯಾಚರಣೆ ನಡೆದ ಹೊರತಾಗಿಯೂ ಯಾವುದೇ ತೀರ್ಮಾನಕ್ಕೆ ಬಾರದೆ ಹಾಗೂ ಯಾವುದೇ ಅವಶೇಷ ಪತ್ತೆಯಾಗದೆ ಇದೀಗ ಅದು ಕೊನೆಗೊಂಡಿದೆಯಲ್ಲದೆ ಈ ಘಟನೆಯ್ನು ವಿಶ್ವದ ಅತಿ ದೊಡ್ಡ ವೈಮಾನಿಕ ನಿಗೂಢ ಘಟನೆಯನ್ನಾಗಿಸಿದೆ. ಆಳ ಸಮುದ್ರದಲ್ಲಿ ವಿಮಾನದ ಅವಶೇಷಗಳಿಗಾಗಿ ಅಹೋರಾತ್ರಿ ದಿನಗಟ್ಟಲೆ ಶೋಧ ಕಾರ್ಯ ನಡೆಸಿದ ಬಳಿಕ ತಂಡ ಕೊನೆಗೂ ತನ್ನ ಕೆಲಸವನ್ನು ಮುಕ್ತಾಯಗೊಳಿಸಿದೆ.
ಆಸ್ಟ್ರೇಲಿಯಾದ ಪಶ್ಚಿಮಕ್ಕಿರುವ ಸಾಗರದ 1,20,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿ ಇದೀಗ ಅದನ್ನು ಅಂತ್ಯಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಜಾಯಿಂಟ್ ಏಜೆನ್ಸಿ ಕೊ-ಆರ್ಡಿನೇಶನ್ ಸೆಂಟರ್ ತಿಳಿಸಿದೆ. ಲಭ್ಯವಿರುವ ಅತ್ಯುತ್ತಮ ವೈಜ್ಞಾನಿಕ ವಿಧಾನಗಳನ್ನು ಬಳಸಿ ಶೋಧವನ್ನು ನಡೆಸಲಾಯಿತಾದರೂ ವಿಮಾನದ ಯಾವುದೇ ಅವಶೇಷ ಪತ್ತೆಯಾಗಿಲ್ಲ ಎಂದು ಮಲೇಷ್ಯಾ, ಆಸ್ಟ್ರೇಲಿಯಾ ಹಾಗೂ ಚೀನೀ ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ತಂಡ ಇನ್ನು ಮುಂದೆ ಉತ್ತರ ಭಾಗದಲ್ಲಿ ತಮ್ಮ ಕಾರ್ಯ ಮುಂದುವರಿಸಬೇಕೆಂದು ತನಿಖಾಧಿಕಾರಿಗಳು ಹೇಳಿದ್ದರಾದರೂ ಆಸ್ಟ್ರೇಲಿಯಾ ಸರಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ.
ವಿಶ್ವದ ಈ ಅತಿ ದೊಡ್ಡ ವೈಮಾನಿಕ ನಿಗೂಢವನ್ನು ಭವಿಷ್ಯದಲ್ಲಿಯೂ ಬೇಧಿಸದೇ ಇರುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ. ಆ ವಿಮಾನದಲ್ಲಿ ಪಯಣಿಸುತ್ತಿದ್ದ 239 ಮಂದಿಯ ಕುಟುಂಬಗಳಿಗೆ ಈ ಸುದ್ದಿ ಇನ್ನಷು ಕಹಿಯನ್ನು ತಲಿದೆ. ತಾವು ತಪ್ಪಾದ ಸ್ಥಳದಲ್ಲಿ ವಿಮಾನದ ಅವಶೇಷಗಳಿಗಾಗಿ ಹುಡುಕುತ್ತಿದ್ದೇವೆ ಎಂದು ಇತ್ತೀಚೆಗೆ ಅಧಿಕಾರಿಗಳು ಒಪ್ಪಿಕೊಂಡಾಗಲೂ ಈ ಕುಟುಂಬಗಳು ಆಘಾತಗೊಂಡಿದ್ದವು.
ಕೌಲಾಲಂಪುರದಿಂದ ಬೀಜಿಂಗಿಗೆ ತೆರಳುವ ಹಾದಿಯಲ್ಲಿ ವಿಮಾನವು ಮಾರ್ಚ್ 8, 2014ರಲ್ಲಿ ನಾಪತ್ತೆಯಾಗಿತ್ತು. ಶೋಧದ ಸಮಯದಲ್ಲಿ ತಂಡಗಳಿಗೆ ಕೆಲವು ವಸ್ತುಗಳು ದೊರೆತ್ತಿತ್ತಾದರೂ ತನಿಖೆಯ ವೇಳೆ ಈ ವಸ್ತುಗಳು ವಿಮಾನದ್ದಲ್ಲ ಎಂದು ತಿಳಿದು ಬಂದಿತ್ತು.