ಗುಜರಾತ್‌ನಲ್ಲಿ ಪ್ರಪಂಚದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಆರಂಭ
ಅಹ್ಮದಾಬಾದ್, ಜ.17: ಅಹ್ಮದಾಬಾದ್‌ನ ಮೊಟೇರಾದಲ್ಲಿ ಇನ್ನೆರಡು ವರ್ಷಗಳಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದ್ದು, ಹೊಸ ಸ್ಟೇಡಿಯಂನ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ.
700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗುಜರಾತ್‌ನ ಕ್ರೀಡಾಂಗಣದಲ್ಲಿ ಆಸನಗಳ ಸಾಮರ್ಥ್ಯ 1,10,000. ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮತ್ತು ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂಗಿಂತಲೂ ಇದ್ದು ದೊಡ್ಡ ಸ್ಟೇಡಿಯಂ ಎನಿಸಿಕೊಳ್ಳಲಿದೆ.
ಈಗಿನ ಮೊಟೇರಾ ಸ್ಟೇಡಿಯಂನ್ನು ಹೊಸ ಸ್ಟೇಡಿಯಂ ನಿರ್ಮಾಣಕ್ಕಾಗಿ ಒಡೆಯಲಾಗುತ್ತಿದ್ದು, ಪ್ರಪಂಚದಲ್ಲೇ ದೊಡ್ಡ ಸ್ಟೇಡಿಯಂ ನಿರ್ಮಾಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದೆ. ಅವರು ಈ ಹಿಂದೆ ಗುಜರಾತ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಹೊಸ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಮೂರು ಅಭ್ಯಾಸ ಗ್ರೌಂಡ್‌ಗಳು ಮತ್ತು ಉದಯೋನ್ಮುಖ ಕ್ರಿಕೆಟಿಗರ ಅಭ್ಯಾಸಕ್ಕೆ ಒಳಾಂಗಣ ಕ್ರಿಕೆಟ್ ಅಕಾಡಮಿ ಸೌಲಭ್ಯ ಇರುತ್ತದೆ.
ಈಗಿನ ಕ್ರೀಡಾಂಗಣದಲ್ಲಿರುವ ಆಸನಗಳ ಸಾಮರ್ಥ್ಯ 49,000.ಮುಂದೆ ಎರಡು ಆಸನಗಳ ಸಾಮರ್ಥ್ಯ ಎರಡು ಪಟ್ಟು ಜಾಸ್ತಿಯಾಗಲಿದ್ದು, 63 ಎಕ್ರೆ ಪ್ರದೇಶದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು, ಕ್ರೀಡಾಂಗಣದ ಬಳಿ 3,000ಕಾರು ಮತ್ತು 10 ಸಾವಿರ ದ್ವಿಚಕ್ರ ವಾಹನಗಳಿಗೆ ನಿಲುಗಡೆಗೆ ಅವಕಾಶ ಇರುತ್ತದೆ. ದೇಶದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್ ಟಿ ಹೊಸ ಕ್ರೀಡಾಂಗಣವನ್ನು 700 ಕೋಟಿ ರೂ. ವೆಚ್ಚದಲ್ಲಿ ಆತ್ಯಾಧುನಿಕ ರೀತಿಯಲ್ಲಿ ನಿರ್ಮಿಸುವ ಗುತ್ತಿಯನ್ನು ವಹಿಸಿಕೊಂಡಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಪರಿಮಾಲ್ ನಥ್ವಾನಿ ತಿಳಿಸಿದ್ದಾರೆ.