119 ಎಸೆತಗಳಲ್ಲಿ ಶೂನ್ಯ ಸಂಪಾದನೆ!
ವೆಲ್ಲಿಂಗ್ಟನ್, ಜ.17: ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೇದಾರ್ ಜಾಧವ್ ಶತಕ ಸಿಡಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದ್ದರು. ಮತ್ತೊಂದೆಡೆ, ಒಟಾಗೊ ಕೌಂಟಿ ನಾಯಕ ಫ್ರೆಸೆರ್ ವಿಲ್ಸನ್ ತನ್ನ ತಂಡವನ್ನು ಸೋಲಿನಿಂದ ಪಾರು ಮಾಡುವ ಪ್ರಯತ್ನದಲ್ಲಿ 119 ಎಸೆತಗಳನ್ನು ಎದುರಿಸಿ ಶೂನ್ಯ ಸಂಪಾದಿಸಿದ್ದರೂ ಎಲ್ಲರ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ.
ಆದರೆ, ವಿಲ್ಸನ್ ಶತಪ್ರಯತ್ನ ವಿಫಲವಾಯಿತು. ಹಾಕ್‌ರೆನ್ ಕಪ್‌ನಲ್ಲಿ ಅವರ ತಂಡ ಸೌಥ್‌ಲ್ಯಾಂಡ್ ತಂಡದ ವಿರುದ್ದ ಮೂರು ಎಸೆತ ಬಾಕಿ ಇರುವಾಗಲೇ ಸೋತಿತ್ತು.
ಗೆಲುವಿಗೆ 345ರನ್ ಗುರಿ ಪಡೆದಿದ್ದ ಒಟಾಗೊ ತಂಡ 99 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗ 8ನೆ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ವಿಲ್ಸನ್ 2 ಗಂಟೆಗೂ ಅಧಿಕ ಕಾಲ ಕ್ರೀಸ್‌ನಲ್ಲಿದ್ದರು. ಟಾಮ್ ಮೈಲ್ಸ್(28ರನ್, 68 ಎಸೆತ) ಅವರೊಂದಿಗೆ 23 ಓವರ್ ಜೊತೆಯಾಟ ನಡೆಸಿದ್ದರು. ಎದುರಾಳಿ ಸೌಥ್‌ಲ್ಯಾಂಡ್ ಬೌಲರ್‌ಗಳ ಬೆವರಿಳಿಸಿದರು.
ಟಾಮ್ ಔಟಾದಾಗ ಸ್ಯಾಮ್ ಬ್ಲಾಕ್ಲೇ ಆಗಮಿಸಿದರು. ಬ್ಲಾಕ್ಲೆ ಬ್ಯಾಟಿಂಗ್‌ಗೆ ಇಳಿದಾಗ ತಂಡವನ್ನು ಸೋಲಿನಿಂದ ಪಾರು ಮಾಡಲು 14 ಓವರ್ ಆಡಬೇಕಾಗಿತ್ತು. ಆದರೆ, ಅವರು 12 ಓವರ್ ಆಡಿ ಔಟಾದರು.
ಮೊದಲ ಇನಿಂಗ್ಸ್‌ನಲ್ಲಿ 35 ಎಸೆತಗಳಲ್ಲಿ 20 ರನ್ ಗಳಿಸಿದ್ದ ವಿಲ್ಸನ್ ಬೌಲಿಂಗ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದ್ದರು. ವಿಲ್ಸನ್ ತಂಡದ ನಾಯಕ ಮಾತ್ರವಲ್ಲ ಮ್ಯಾನೇಜರ್ ಕೂಡ ಹೌದು.
‘‘ಆ ಪರಿಸ್ಥಿತಿಗೆ ಅಂತಹ ಇನಿಂಗ್ಸ್ ಅಗತ್ಯವಿತ್ತು. ಹಾಗಾಗಿ ಆ ರೀತಿ ಆಡಿದ್ದೆ’’ ಎಂದು ವಿಲ್ಸನ್ ಪ್ರತಿಕ್ರಿಯಿಸಿದರು. ವಿಲ್ಸನ್ ಪ್ರಯತ್ನದ ಹೊರತಾಗಿಯೂ ಒಟಾಗೊ ತಂಡ ಸೋತಿದೆ. ಆದರೆ, ನಾಯಕ ವಿಲ್ಸನ್ ಅವರ ಪ್ರಯತ್ನವು ಶ್ಲಾಘನೆಗೆ ಒಳಗಾಗಿದೆ. 119 ಎಸೆತಗಳ ಇನಿಂಗ್ಸ್‌ನಲ್ಲಿ ಅವರ ನಿಲುವು, ತಂಡಕ್ಕೆ ಎಲ್ಲವನ್ನು ನೀಡಬೇಕೆಂಬ ಕ್ರೀಡಾಪಟುವಿನ ಧೈರ್ಯವನ್ನು ಎತ್ತಿ ತೋರಿಸುತ್ತಿದೆ.