ಚರಕದೆದುರು ಕೂತ ಪ್ರಧಾನಿ ಮೋದಿಗೆ ಹಾರ್ದಿಕ್ ಪಟೇಲ್ ಹೇಳಿದ್ದೇನು ?

Update: 2017-01-17 14:33 GMT

ಅಹ್ಮದಾಬಾದ್, ಜ.17: ಗುಜರಾತ್‌ನಿಂದ 6 ತಿಂಗಳ ‘ಗಡೀಪಾರು’ ಶಿಕ್ಷೆಗೆ ಒಳಗಾಗಿದ್ದ ಕಾರ್ಯಕರ್ತ ಹಾರ್ದಿಕ್ ಪಟೇಲ್, ಶಿಕ್ಷೆಯ ಅವಧಿ ಮುಗಿದ ಬಳಿಕ ಗುಜರಾತ್ ಪ್ರವೇಶಿಸಿದೊಡನೆ ಪ್ರಧಾನಿ ಮೋದಿ ವಿರುದ್ಧದ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ಖಾದಿ ಆಯೋಗದ ಕ್ಯಾಲೆಂಡರ್‌ನಲ್ಲಿ ಗಾಂಧೀಜಿಗೆ ಗೇಟ್‌ಪಾಸ್ ನೀಡಿ ಮೋದಿ ಪ್ರತ್ಯಕ್ಷವಾಗಿರುವುದನ್ನು ಟೀಕಿಸಿದ ಹಾರ್ದಿಕ್, ಮೋದಿ ಮಹಾತ್ಮಾ ಗಾಂಧಿಯಲ್ಲ ಎಂದಿದ್ದಾರೆ.

  ಎರಡೂವರೆ ಲಕ್ಷ ರೂ. ಬೆಲೆಬಾಳುವ ಸೂಟ್ ಧರಿಸಿ ನಿಮ್ಮನ್ನು ನೀವೇ ಗಾಂಧಿ ಎಂದು ಕರೆಸಿಕೊಂಡರೆ ಆಗದು. ಚರಕದ ಎದುರು ಕುಳಿತವರೆಲ್ಲಾ ಗಾಂಧಿಯಾಗುವುದಿಲ್ಲ ಎಂದು ಪಟೇಲ್ ಕಟಕಿಯಾಡಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಪಟೇಲ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ಮುಂದುವರಿಯುತ್ತದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

 ಪ್ರಧಾನಿ ಮೋದಿಯ ತವರೂರು ಗುಜರಾತ್‌ನಲ್ಲೇ ಬಿಜೆಪಿಗೆ ಈ ವರ್ಷಾಂತ್ಯ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಿಸಿ ಮುಟ್ಟಿಸಲು ಪಣ ತೊಡುವಂತೆ ಕಾರ್ಯಕರ್ತರಿಗೆ ಅವರು ಕರೆ ನೀಡಿದರು. ಬಿಜೆಪಿಯನ್ನು ನಂಬಿಕೊಂಡು ಬೆಂಬಲಿಸಿದ್ದ ಪಟೇಲ್ ಸಮುದಾಯದವರಿಗೆ ಬಿಜೆಪಿ ವಂಚನೆ ಮಾಡಿದೆ ಎಂದವರು ಆರೋಪಿಸಿದರು. ನನ್ನ ಮೇಲೆ ಎಷ್ಟೇ ಕೇಸು ದಾಖಲಾದರೂ ಚಿಂತೆ ಇಲ್ಲ. ಆದರೆ ಮೀಸಲಾತಿಗೆ ಆಗ್ರಹಿಸುವುದನ್ನು ನಿಲ್ಲಿಸಲಾರೆ ಎಂದ ಅವರು, ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾನು ಬೆಂಬಲಿಗರ ಸಹಿತ ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

ಅಹ್ಮದಾಬಾದ್ ತಲುಪಿದ ಹಾರ್ದಿಕ್‌ರನ್ನು 500 ಕಾರುಗಳ ಸಹಿತ ರ್ಯಾಲಿಯಲ್ಲಿ ಹಿಮ್ಮತ್‌ನಗರಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ಅವರು ಸುಮಾರು 1 ಲಕ್ಷ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಭವಿಷ್ಯದ ನಡೆಯನ್ನು ತೀರ್ಮಾನಿಸಲಿದ್ದಾರೆ ಎಂದು ಪಟೇಲ್ ಅನಾಮತ್ ಆಂದೋಲನ್‌ನ ಮುಖಂಡ ವರುಣ್ ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News