ತೀವ್ರಗೊಂಡ ಜಲ್ಲಿಕಟ್ಟು ಪ್ರತಿಭಟನೆ : ಮದುರೈನಲ್ಲಿ 240 ಮಂದಿ ಬಂಧನ
ಮದುರೈ,ಜ.17: ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋಟ್‌ನ ನಿಷೇಧವನ್ನು ವಿರೋಧಿಸಿ,ಮಂಗಳವಾರ ಮದುರೈ ಜಿಲ್ಲೆಯ ಆಲ್ಲಂಗನ್ನೂರ್‌ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯನ್ನು ಪೊಲೀಸರು ತಡೆದಿದ್ದು, ಸುಮಾರು 240ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ಹೇರಿರುವ ನಿಷೇಧವನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಪ್ರತಿಭಟನಕಾರರು ಸೋಮವಾರ ರಾತ್ರಿಯಿಂದ ಧರಣಿಯನ್ನು ನಡೆಸುತ್ತಿದ್ದರು.
ಜಲ್ಲಿಕಟ್ಟು ಮೇಲೆ ಸುಪ್ರೀಂಕೋರ್ಟ್ ನಿಷೇದ ವಿರುದ್ಧ ನಿನ್ನೆ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿರುವ ನೂರಾರು ಜನರು ರಸ್ತೆಯಲ್ಲಿ ಅಡುಗೆ ಮಾಡಿ ಉಂಡರು ಹಾಗೂ ರಾತ್ರಿಯಿಡೀ ಅಲ್ಲೇ ಕಳೆದರು.
ಆಸುಪಾಸಿನ ಗ್ರಾಮಗಳ ನಿವಾಸಿಗಳು ಇಂದು ಅಲಂಗನ್ನೂರ್‌ನಲ್ಲಿ ಸಭೆ ಸೇರಿ ಬಂಧಿತರ ಬಿಡುಗಡೆಗೆ ಹಾಗೂ ಜಲ್ಲಿಕಟ್ಟುಗೆ ಅನುಮತಿ ನೀಡುವಂತೆ ಆಗ್ರಹಿಸಿದವು.
ಮಂಗಳವಾರ ಮಧ್ಯಾಹ್ನದ ವೇಳೆ ಪೊಲೀಸರು ಬಂಧಿತರೆಲ್ಲರನ್ನು ಬಿಡುಗಡೆಗೊಳಿಸಿದರು. ಆದಾಗ್ಯೂ ಅವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲವೆಂದು ತಿಳಿದು ಂದಿದೆ.
ಬಂಧಿತರ ಬಿಡುಗಡೆಯ ಬಳಿಕವೂ ಧರಣಿ ನಿರತರು ಸ್ಥಳದಲ್ಲಿ ಉಳಿದುಕೊಂಡಿದ್ದು, ಜಲ್ಲಿಕಟ್ಟು ಮೇಲೆ ನಿಷೇಧ ಹಿಂತೆಗೆದುಕೊಳ್ಳುವ ತನಕವೂ ಪ್ರತಿಭಟನೆ ಮುಂದುವರಿಸು ವುದಾಗಿ ಪಟ್ಟುಹಿಡಿದಿದ್ದಾರೆ.
ಏತನ್ಮಧ್ಯೆ ಸೋಮವಾರ ಮದುರೈ ಬಳಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಜಲ್ಲಿಕಟ್ಟು ಗೂಳಿ ಕಾಳಗ ಕ್ರೀಡೆಯನ್ನು ಆಯೋಜಿಸಿದ್ದ 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆ ತಮಿಳುನಾಡಿನಾದ್ಯಂತ ಮಂಗಳವಾರವೂ ಮುಂದುವರಿದಿದೆ. ಚೆನ್ನೈನ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ಬೆಂಬಲಿಗರು ಮಾನವ ಸರಳಿ ರಚಿಸಿ ಕೇಂದ್ರ ಸರಕಾರ ಹಾಗೂ ಪ್ರಾಣಿ ದಯಾ ಸಂಘಟನೆ ಪೆಟಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೇಲಂ ಜಿಲ್ಲೆಯ ಅಟ್ಟೂರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜಲ್ಲಿಕಟ್ಟು ಬೆಂಬಲಿಗರನ್ನು ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಿದ್ದಾರೆ. ಪ್ರತಿಪಕ್ಷ ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಜಲ್ಲಿಕಟ್ಟು ಪರ ಪ್ರತಿಭಟನಕಾರರಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.