×
Ad

ಬಿಎಸ್‌ಎಫ್ ಯೋಧನ ವಿವಾದಿತ ವಿಡಿಯೋ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದಿಲ್ಲಿ ಹೈಕೋರ್ಟ್

Update: 2017-01-17 21:16 IST

ದಿಲ್ಲಿ, ಜ.17: ಗಡಿಗಳಲ್ಲಿ ಸೈನಿಕರಿಗೆ ಅತ್ಯಂತ ಕಳಪೆದರ್ಜೆಯ ಆಹಾರವನ್ನು ಉಣಬಡಿಸ ಲಾಗುತ್ತಿದೆಯೆಂದು ಆರೋಪಿಸುವ ವಿಡಿಯೋವನ್ನು ಬಿಎಸ್‌ಎಫ್ ಯೋಧನೊಬ್ಬ ಪ್ರಸಾರ ಮಾಡಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ತನಗೆ ವಿವರಣೆ ನೀಡುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಮಂಗಳವಾರ ಆದೇಶಿಸಿದೆ.

ಆದಾಗ್ಯೂ ವಿವಾದಿತ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದ ಬಿಎಸ್‌ಎಫ್ ಯೋಧ ತೇಜ್‌ಬಹಾದ್ದೂರ್ ಯಾದವ್ ವಿರುದ್ಧ ಅರೆಸೈನಿಕ ಪಡೆಯು ಶಿಸ್ತುಕ್ರಮವನ್ನು ಕೈಗೊಳ್ಳುವುದರ ವಿರುದ್ಧ ಯಾವುದೇ ರಕ್ಷಣೆಯನ್ನು ನೀಡಲು ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್ ಅವರನ್ನೊಳಗೊಂಡ ಪೀಠವು ನಿರಾಕರಿಸಿದೆ.

  ಇಂದು ನಡೆದ ಸಂಕ್ಷಿಪ್ತ ಆಲಿಕೆಯ ವೇಳೆ,ಕೇಂದ್ರ ಗೃಹ ಸಚಿವಾಲಯದ ವಕೀಲರು, ಗಡಿಗಳಲ್ಲಿ ಯೋಧರಿಗೆ ಕಳಪೆ ಆಹಾರ ಪೂರೈಕೆಯ ಕುರಿತಾಗಿ ತನಿಖೆಗೆ ಆದೇಶಿಸಲಾಗಿದೆ ಹಾಗೂ ಈ ಬಗ್ಗೆ ಶೀಘ್ರವೇ ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದರು.

 ಗಡಿಗಳಲ್ಲಿ ಯೋಧರಿಗೆ ಪೂರೈಕೆಯಾಗುತ್ತಿರುವ ಆಹಾರದ ಕುರಿತು ಸ್ಥಿತಿಗತಿ ವರದಿಯನ್ನು ನೀಡುವಂತೆ ಕೇಂದ್ರ ಗೃಹಸಚಿವಾಲಯಕ್ಕೆ ನ್ಯಾಯಪೀಠ ತಿಳಿಸಿದೆ ಹಾಗೂ ಪಡಿತರ ಸಂಗ್ರಹ ಪ್ರಕ್ರಿಯೆ, ಆಹಾರ ತಯಾರಿ ಹಾಗೂ ಅದನ್ನು ಪಡೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೂ ವಿತರಿಸುವ ಕುರಿತಾಗಿ ಮಾಹಿತಿ ಕೋರಿ ನ್ಯಾಯಪೀಠವು ಅರೆಸೈನಿಕ ಪಡೆಗಳಾದ ಬಿಎಸ್‌ಎಫ್, ಸಿಐಎಸ್‌ಎಫ್,ಸಿಆರ್‌ಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ ಹಾಗೂ ಅಸ್ಸಾಂ ರೈಫಲ್‌ಗೆ ನೋಟಿಸ್ ಜಾರಿಗೊಳಿಸಿತು ಹಾಗೂ ಪ್ರಕರಣದ ಮುಂದಿನ ಆಲಿಕೆಯನ್ನು ಫೆಬ್ರವರಿ 27ಕ್ಕೆ ನಿಗದಿಪಡಿಸಿತು.

 ಯೋಧರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೇಂದ್ರ ಸರಕಾರದ ಮಾಜಿ ಉದ್ಯೋಗಿ ಪೂರಣ್ ಚಂದ್ರ ಆರ್ಯ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಲಿಕೆ ನಡೆಸಿದ ಸಂದರ್ಭದಲ್ಲಿ ನ್ಯಾಯಪೀಠವು ಈ ಸೂಚನೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News