×
Ad

ವ್ಯಕ್ತಿಯ ಧರ್ಮ ಕೊಲೆಗೆ ಪ್ರೇರಣೆ ನೀಡಿದ್ದರಿಂದ ಜಾಮೀನು ಮಂಜೂರು : ನ್ಯಾಯಾಧೀಶರ ತೀರ್ಪಿನ ವಿರುದ್ದ ವ್ಯಾಪಕ ಆಕ್ರೋಶ

Update: 2017-01-17 21:48 IST

ಮುಂಬೈ, ಜ.17: ಅರ್ಜಿದಾರರು/ಆರೋಪಿಗಳು ಯಾವುದೇ ಅಪರಾಧದ ಹಿನ್ನೆಲೆ ಹೊಂದಿಲ್ಲ. ಧರ್ಮದ ಹೆಸರಿನಲ್ಲಿ ಅವರು ಪ್ರಚೋದನೆಗೆ ಒಳಗಾಗಿ ಕೊಲೆ ಕೃತ್ಯ ಎಸಗಿರುವುದು ಕಂಡುಬರುತ್ತದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ’

 ಹೀಗೆಂದು ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ತಮ್ಮ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು ಕಾರಣ ನೀಡಿದಾಗ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಕೊಲೆಯಾದ ಮೊಹ್ಸಿನ್ ಶೇಖ್ ಅವರ ಕುಟುಂಬ ವರ್ಗದವರು ದಿಗ್ಭ್ರಮೆಗೊಂಡರು. ನ್ಯಾಯಾಧೀಶರ ಈ ತೀರ್ಪಿನ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ವಾಪಸಾಗುತ್ತಿದ್ದ 28ರ ಹರೆಯದ ಮೊಹ್ಸಿನ್ ಶೇಖ್‌ನನ್ನು ಹಿಂದು ರಾಷ್ಟ್ರಸೇನಾದ (ಎಚ್‌ಆರ್‌ಎಸ್) ಕಾರ್ಯಕರ್ತರು 2014ರ ಜೂನ್‌ನಲ್ಲಿ ಅಮಾನುಷವಾಗಿ ಹತ್ಯೆ ಮಾಡಿದ್ದರು. ಹದಾಸ್‌ಪುರ ಪೊಲೀಸ್ ಠಾಣೆಯಲ್ಲಿ ಎಚ್‌ಆರ್‌ಎಸ್ ಸದಸ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು ಮತ್ತು ಈ ತಂಡದ ಮುಖಂಡ ಧನಂಜಯ್ ಜಯರಾಮ ದೇಸಾಯಿ ಅಲಿಯಾಸ್ ಭಾಯ್ ಎಂಬಾತನೂ ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿತ್ತು. ಇವರಲ್ಲಿ 14 ಜನರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ.

ಮೊಹ್ಸಿನ್ ವಿರುದ್ಧ ಈ ಆರೋಪಿಗಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಆತ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿ ಎಂಬ ಏಕೈಕ ಕಾರಣಕ್ಕೆ ಈ ಕೊಲೆ ನಡೆಸಲಾಗಿದೆ ಎಂದು ಜಾಮೀನು ಮಂಜೂರು ಮಾಡಿದ ಸಂದರ್ಭ ನ್ಯಾಯಾಧೀಶ ಭಟ್ಕರ್ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಕೃತ್ಯಕ್ಕೂ ಮೊದಲು ಹಿಂದು ರಾಷ್ಟ್ರ ಸೇನಾದ ಸದಸ್ಯರ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಧನಂಜಯ ದೇಸಾಯಿ ಸಭೆಯಲ್ಲಿದ್ದವರಿಗೆ ದುರ್ಬೋಧನೆ ಮಾಡಿದ್ದ. ಧರ್ಮದ ಹೆಸರಿನಲ್ಲಿ ಅವರಲ್ಲಿ ದ್ವೇಷ ಭಾವನೆ ಕೆರಳಿಸಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಮತ್ತು ಸಭೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಇಬ್ಬರು ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನೂ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

  ಶಿವಾಜಿಯನ್ನು ಹೀಯಾಳಿಸುವ ಚಿತ್ರಗಳನ್ನು ಮುಸ್ಲಿಮರು ಫೇಸ್‌ಬುಕ್‌ನಲ್ಲಿ ಹಾಕಿರುವ ಕಾರಣ ಅವರನ್ನು ಥಳಿಸಬೇಕು . ಅವರ ಅಂಗಡಿ, ವಾಹನಗಳನ್ನು ಹಾಳುಗೆಡವಬೇಕು . ಈ ಪ್ರದೇಶದಲ್ಲಿ ಯಾವುದೇ ವ್ಯಾಪಾರ ನಡೆಸಲು ಅವರಿಗೆ ಅವಕಾಶ ನೀಡಬಾರದು . ಹದಾಸ್‌ಪುರ ಪ್ರದೇಶದಲ್ಲಿ ಎಚ್‌ಆರ್‌ಎಸ್ ಹೆಸರೆತ್ತಿದರೇ ಭೀತಿ ಪಡುವಂತಹ ಪರಿಸ್ಥಿತಿ ನಿರ್ಮಿಸಬೇಕು ಎಂದು ಧನಂಜಯ್ ದೇಸಾಯಿ ಸಭೆಯಲ್ಲಿ ಹೇಳಿದ್ದ. ಹಾಕಿ ಸ್ಟಿಕ್, ದೊಣ್ಣೆ ಇತ್ಯಾದಿ ಆಯುಧಗಳನ್ನು ಹೊಂದಿದ್ದ ಕಾರ್ಯಕರ್ತರು ಈ ಮಾತಿನಿಂದ ಉತ್ತೇಜಿತರಾಗಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಬಾಂಬೆ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಫೆ.1ರಿಂದ ಆರಂಭವಾಗಲಿದೆ. ಈ ಮಧ್ಯೆ, ಕೊಲೆಗೀಡಾದ ಮೊಹ್ಸಿನ್ ಕುಟುಂಬದವರು ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News