ದಂಗಲ್ ಹುಡುಗಿ ಪರ ಆಮಿರ್, ಕೈಫ್, ಗಂಭೀರ್ ಬ್ಯಾಟಿಂಗ್

Update: 2017-01-18 05:22 GMT

ಹೊಸದಿಲ್ಲಿ, ಜ.18: ಕಾಶ್ಮೀರ ಪ್ರತ್ಯೇಕತಾವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ದಂಗಲ್ ಹುಡುಗಿ ಝೈರಾ ವಾಸಿಂ ಬೆಂಬಲಕ್ಕೆ ಇದೀಗ ಬಾಲಿವುಡ್ ಹಾಗೂ ಕ್ರಿಕೆಟ್ ಸೆಲೆಬ್ರಿಟಿಗಳು ನಿಂತಿದ್ದಾರೆ. ಹದಿಹರೆಯದ ಝೈರಾ ಅವರನ್ನು ಬೆಂಬಲಿಸಿ ಆಮಿರ್‌ ಖಾನ್, ಮುಹಮ್ಮದ್ ಕೈಫ್, ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.

ಹದಿನಾರು ವರ್ಷದ ಶ್ರೀನಗರ ಯುವತಿ ಝೈರಾ, ಆಮಿರ್‌ ಖಾನ್ ಅವರ ದಂಗಲ್ ಚಿತ್ರದಲ್ಲಿ ಒಲಿಂಪಿಯನ್ ಕುಸ್ತಿಪಟು ಗೀತಾ ಫೋಗತ್ ಅವರ ಪಾತ್ರವನ್ನು ನಿರ್ವಹಿಸಿದ್ದರು. ಕಾಶ್ಮೀರ ಪ್ರತ್ಯೇಕತಾವಾದಿಗಳಿಂದ ಈ ಯಶಸ್ಸಿಗೆ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಝೈರಾ ಕ್ಷಮೆ ಯಾಚಿಸಿದ್ದರು. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ ಇನ್ನೂ ತಹಬಂದಿಗೆ ಬರುವ ಮುನ್ನವೇ, ಈ ಯುವತಿ ಮೇಲೆ ಬಹಳಷ್ಟು ಮಂದಿ ಒತ್ತಡ ತಂದಿದ್ದರು.

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಅವರನ್ನು ಭೇಟಿ ಮಾಡಿದ ಝೈರಾ ಅವರನ್ನು ಲೈಂಗಿಕವಾಗಿ ನಿಂದಿಸಿ "ಭಾರತೀಯ ಏಜೆಂಟರು" ಎಂದು ಜಾಲತಾಣಗಳ ಮೂಲಕ ಪ್ರತ್ಯೇಕತಾವಾದಿಗಳು ನಿಂದಿಸಿದ್ದರು.

ಇದಕ್ಕೆ ಆಕ್ಷೇಪಿಸಿರುವ ಆಮಿರ್‌ ಖಾನ್, "ಝೈರಾ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ನಿಮ್ಮಂಥ ಯುವ, ಪ್ರತಿಭಾವಂತ, ಕಠಿಣ ಪರಿಶ್ರಮಿ, ಗೌರವಯುತ, ಕಾಳಜಿ ಹಾಗೂ ಸಾಹಸಿ ಮಕ್ಕಳು, ಇಡೀ ದೇಶದ ಮಾತ್ರವಲ್ಲ; ವಿಶ್ವದ ಎಲ್ಲೆಡೆಯ ಮಕ್ಕಳಿಗೆ ಮಾದರಿ" ಎಂದು ಧೈರ್ಯ ತುಂಬಿದ್ದಾರೆ.


ಇದಕ್ಕೆ ಗೌತಮ್ ಗಂಭೀರ್, ಮುಹಮ್ಮದ್ ಕೈಫ್ ದನಿಗೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News