ದಶಕಗಳ ಕಾಯುವಿಕೆಯ ನಂತರ ಭಾರತೀಯ ಯೋಧರಿಗೆ ಲಭ್ಯವಾಗಲಿದೆ ಅತ್ಯಾಧುನಿಕ ಹೆಲ್ಮೆಟ್
ಹೊಸದಿಲ್ಲಿ, ಜ.18: ಸುಮಾರು ಎರಡು ದಶಕಗಳ ಕಾಯುವಿಕೆಯ ಬಳಿಕ ಭಾರತೀಯ ಸೇನೆಯ ಯೋಧರಿಗೆ ಕೊನೆಗೂ ಅತ್ಯಾಧುನಿಕ ವಿಶ್ವ ದರ್ಜೆಯ ಹೆಲ್ಮೆಟ್ ಗಳು ಲಭ್ಯವಾಗಲಿವೆ. ಮಿಲಿಟರಿ ಕಾರ್ಯಾಚರಣೆಯ ಸಂದರ್ಭ ಈ ಅತ್ಯಾಧುನಿಕ ಹೆಲ್ಮೆಟ್ ಗಳು ಯೋಧರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಮೂಲಗಳ ಪ್ರಕಾರ ಕಾನ್ಪುರ ಮೂಲದ ಎಂಕೆಯು ಇಂಡಸ್ಟ್ರೀಸ್ ಗೆ 1.58 ಲಕ್ಷ ಹೆಲ್ಮೆಟ್ ತಯಾರಿಕೆಗೆ ಗುತ್ತಿಗೆ ನೀಡಲಾಗಿದೆ ಹಾಗೂ ಈ ಗುತ್ತಿಗೆಯ ಮೌಲ್ಯ ರೂ.170 ಕೋಟಿಯಿಂದ ರೂ.180 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ. ಹೆಲ್ಮೆಟ್ ತಯಾರಿ ಆರಂಭವಾಗಿದ್ದು, ಇಷ್ಟೊಂದು ದೊಡ್ಡ ಸಂಖ್ಯೆಯ ಹೆಲ್ಮೆಟ್ ಗಳಿಗೆ ಆರ್ಡರ್ ನೀಡಿರುವುದು ಕಳೆದೆರಡು ದಶಕಗಳಲ್ಲಿಯೇ ಮೊದಲ ಬಾರಿ ಎಂದು ಹೇಳಲಾಗಿದೆ.
ಹೊಸ ಹೆಲ್ಮೆಟ್ ಗಳು ಮುಂದಿನ ಮೂರು ವರ್ಷಗಳಲ್ಲಿ ಲಭ್ಯವಾಗಲಿದ್ದು, ತಯಾರಿಕಾ ಸಂಸ್ಥೆ ಎಂಕೆಯು ಇಂಡಸ್ಟ್ರೀಸ್ ಗುಂಡು ನಿರೋಧಕ ಜಾಕೆಟುಗಳು ಹಾಗೂ ಹೆಲ್ಮೆಟ್ ಗಳ ತಯಾರಿಯಲ್ಲಿ ಅತ್ಯಂತ ನಿಪುಣ ಸಂಸ್ಥೆಯಾಗಿದೆ.
ಕಡಿಮೆ ದೂರದಿಂದ 9 ಎಂಎಂ ರೈಫಲ್ ಗಳಿಂದ ಹಾರಿಸಲಾಗುವ ಗುಂಡುಗಳಿಗೆ ಈ ಹೆಲ್ಮೆಟ್ ಗಳು ನಿರೋಧಕವಾಗಿವೆ. ಈ ಹೆಲ್ಮೆಟ್ ಗಳು ಧರಿಸಲೂ ಆರಾಮದಾಯಕವಾಗಿದ್ದು, ಸಂಪರ್ಕ ಸಾಧನಗಳನ್ನೂ ಅಳವಡಿಸಿಯೇ ಇದನ್ನು ನೀಡಲಾಗುವುದು. ಹತ್ತು ವರ್ಷಗಳ ಹಿಂದೆ ಸ್ಪೆಷಲ್ ಫೋರ್ಸ್ ಗೆ ಇಸ್ರೇಲಿನ ಓಆರ್-201 ಹೆಲ್ಮೆಟ್ ಗಳನ್ನು ತರಿಸಲಾಗಿತ್ತು. ಇವುಗಳು ಗ್ಲಾಸ್ ರಿ-ಇನ್ಫೋರ್ಸ್ಡ್ ಪ್ಲಾಸ್ಟಿಕ್ ನಿಂದ ನಿರ್ಮಿಸಲ್ಪಟ್ಟಿದ್ದವು.
ಅದರೆ ಸಾಮಾನ್ಯ ಯೋಧರು ಮಾತ್ರ ಎಂದಿನಂತೆಯೇ ದೇಶದಲ್ಲಿಯೇ ನಿರ್ಮಿತವಾದ ಭಾರದ ಹೆಲ್ಮೆಟ್ ಗಳನ್ನೇ ಧರಿಸುವಂತಾಗಿತ್ತು.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸರಕಾರ 50,000 ಹೊಸ ಬುಲೆಟ್ ಪ್ರೂಫ್ ಜಾಕೆಟ್ ಗಳ ಖರೀದಿಗೆಂದು ತುರ್ತು ಒಪ್ಪಂದವೊಂದಕ್ಕೆ ಟಾಟಾ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಲಿ. ಜತೆ ಹತ್ತು ವರ್ಷಗಳ ವಿಳಂಬದ ನಂತರ ಸಹಿ ಹಾಕಿತ್ತು.