ಹಜ್ ಸಬ್ಸಿಡಿ ಪಡೆಯುವುದು ‘ಅಷ್ಟು’ ಸರಿಯಲ್ಲ : ಸಚಿವ ಕೆ.ಟಿ.ಜಲೀಲ್
ಹೊಸದಿಲ್ಲಿ,ಜ.18: ಸಬ್ಸಿಡಿಯನ್ನು ಹಜ್ ಯಾತ್ರಾರ್ಥಿಗಳು ಸ್ವೀಕರಿಸುವುದು ಸರಿಯಲ್ಲ ಎಂದು ಕೇರಳದ ಸಚಿವ ಕೆ.ಟಿ. ಜಲೀಲ್ ಹೇಳಿದ್ದಾರೆ. ಆದರೆ, ಇದು ತನ್ನ ವೈಯಕ್ತಿಕ ಆಭಿಪ್ರಾಯ ಮಾತ್ರ ಎಂದಿರುವ ಅವರು, ಕೇಂದ್ರ ಸರಕಾರ ನೀಡುವ ಹಜ್ ಸಬ್ಸಿಡಿಯಲ್ಲಿ ತೆರಿಗೆ ಹಣವೂ ಇದೆ. ತೆರಿಗೆ ನೀಡಿದವರು ಹಜ್ ಸಬ್ಸಿಡಿ ಕುರಿತು ವಿರೋಧ ವ್ಯಕ್ತಪಡಿಸುವುದಿದ್ದರೆ ಅಂತಹ ಸಬ್ಸಿಡಿಯನ್ನು ಪಡೆಯುವುದು ಸಮ್ಮತಾರ್ಹವಲ್ಲ. ಆದ್ದರಿಂದ ತಾನೇನಾದರೂ ಹಜ್ ಕರ್ಮ ನಿರ್ವಹಿಸಲು ಹೋಗುವುದಾದರೆ ಇಂತಹ ಹಣವನ್ನು ಸಬ್ಸಿಡಿಯಾಗಿ ಸ್ವೀಕರಿಸಲಾರೆ ಎಂದು ಜಲೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು, ಕೇಂದ್ರಸರಕಾರ ಹಜ್ ಸಬ್ಸಿಡಿ ಕುರಿತು ಅಧ್ಯಯನಕ್ಕೆ ಸಮಿತಿ ನೇಮಕಮಾಡಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಸರಕಾರ ನೀಡುವ ಹಜ್ ಸಬ್ಸಿಡಿಯನ್ನು ಈವರೆಗೂ ಯಾರೂ ವಿರೋಧಿಸುತ್ತಿರಲಿಲ್ಲ. ಆದರೆ ಈಗ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ತೆರಿಗೆ ಹಣವನ್ನು ಹಜ್ ಸಬ್ಸಿಡಿಗೆ ಬಳಸುವುದು ಅವರಿಗೆ ಸಮ್ಮತವಲ್ಲ ಎಂದಾಯಿತು. ಆದ್ದರಿಂದ ಅವರ ಹಣ ಕೂಡಾ ಇರಬಹುದಾದ ಕೇಂದ್ರಸರಕಾರದ ಸಬ್ಸಿಡಿಯನ್ನು ಹಜ್ ಯಾತ್ರೆಗೆ ಹೋಗುವವರು ಬಳಸುವುದು ಸರಿಯಲ್ಲ ಎಂದು ಜಲೀಲ್ ಅಭಿಪ್ರಾಯಪಟ್ಟರು.
ವಿಮಾನಕಂಪೆನಿಗಳಿಗೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿ. ಹಜ್ ವಿಮಾನ ಸರ್ವೀಸ್‌ಗೆ ಗ್ಲೋಬಲ್ ಟೆಂಡರ್ ಕರೆದು ಪ್ರಯಾಣ ವೆಚ್ಚ ಕಡಿಮೆಗೊಳಿಸಬೇಕೆಂದು ಸಮುದಾಯದೊಳಗಿಂದಬೇಡಿಕೆ ಬಂದಿದೆ. ಇದಕ್ಕೆ ತನ್ನ ಬೆಂಬಲವಿದೆ. ಹಜ್‌ಸರ್ವೀಸ್‌ನಲ್ಲಿ ಗ್ಲೋಬಲ್ ಟೆಂಡರ್ ಕರೆಯಬೇಕೆನ್ನುವುದು ಕೇರಳ ಸರಕಾರದ ನಿಲುವು ಕೂಡಾ ಆಗಿದೆ. ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮುಂದೆ ಈ ಪ್ರಸ್ತಾವವನ್ನು ಇರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆಂದು ವರದಿ ತಿಳಿಸಿದೆ.