×
Ad

ಯುದ್ಧ ಆದರೆ 48 ಗಂಟೆಗಳಲ್ಲಿ ದಿಲ್ಲಿ ತಲುಪಬಹುದು ಎಂದು ಚೀನಾ ಟಿವಿ ಹೇಳಿಕೆಗೆ ಭಾರತೀಯರ ಪ್ರತಿಕ್ರಿಯೆ ಏನು ಗೊತ್ತೇ ?

Update: 2017-01-18 14:02 IST

ಹೊಸದಿಲ್ಲಿ, ಜ.18: ಭಾರತ ಮತ್ತು ಚೀನಾ ನಡುವಣ ಸಂಬಂಧಗಳು ಸಹಜವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. 1962ರಲ್ಲಿ ಈ ಎರಡೂ ದೇಶಗಳ ನಡುವೆ ಯುದ್ಧ ನಡೆದಿದ್ದರೆ ಅಂದಿನಿಂದ ಇಂದಿನವರೆಗೂ ಎರಡೂ ದೇಶಗಳು ಒಂದಿಲ್ಲ ಒಂದು ಕಾರಣಕ್ಕೆ ಉದ್ವಿಗ್ನತೆಯ ವಾತಾವರಣ ಎದುರಿಸಿವೆ. ಇಂತಹ ಒಂದು ಸನ್ನಿವೇಶದಲ್ಲಿ ಚೀನಾದ ಸರ್ಕಾರಿ ಟಿವಿ ಚಾನೆಲ್-ಇಂಟರ್ ನ್ಯಾಷನಲ್ ಸ್ಪೆಕ್ಟೇಟರ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ @ಸ್ಪೆಕ್ಟೇಟರ್‌ ಇಂಡೆಕ್ಸ್ ಮುಖಾಂತರ ಮಾಡಿದ ಟ್ವೀಟೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

‘‘ಯುದ್ಧವೇನಾದರೂ ಆದರೆ ಚೀನಾ ತನ್ನ ಪಡೆಗಳನ್ನು ಭಾರತದ ರಾಜಧಾನಿ ಹೊಸದಿಲ್ಲಿಗೆ ಕೇವಲ 48 ಗಂಟೆಗಳಲ್ಲಿ ಕಳುಹಿಸಬಹುದು ಹಾಗೂ ತನ್ನ ಪ್ಯಾರಾಟ್ರೂಪರುಗಳನ್ನು 10 ಗಂಟೆಗಳೊಳಗಾಗಿ ಕಳುಹಿಸಬಹುದು’’ ಎಂದು ಈ ಟ್ವೀಟ್ ನಲ್ಲಿ ಹೇಳಲಾಗಿದೆ.

ಈ ಟ್ವೀಟ್ ಭಾರತೀಯರ ಗಮನಕ್ಕೆ ಬಂದಿದ್ದೇ ತಡ, ಟ್ವೀಟುಗಳ ಮಹಾಪೂರವೇ ಹರಿದು ಬಂದಿದೆ. ಪ್ರಾಯಶಃ ಭಾರತಕ್ಕೆ ಚೀನಾ ಪಡೆಗಳು ಬಂದರೂ ಈ ಟ್ವೀಟುಗಳೇ ಅದಕ್ಕೆ ದೊಡ್ಡ ಅಡ್ಡಿಯಾಗಲಿವೆಯೇನೋ ?

ಒಬ್ಬ ಟ್ವಿಟ್ಟರಿಗ- ಅರ್ನಬ್ ರಾಯ್ ಅವರು ಚೀನಾದ ಟ್ವೀಟಿಗೆ ಉತ್ತರವಾಗಿ ‘‘ಡಿಯರ್ ಚೈನಾ, ನಮ್ಮ ದಿಲ್ಲಿಯ ಸೋಮನಾಥ್ ಭಾರತಿಯವರ ನಾಯಿಗಳಿಂದ, ಕೇಜ್ರಿವಾಲ್ ಅವರ ಟ್ವೀಟುಗಳಿಂದ ಹಾಗೂ ಅಶುತೋಷ್ ಅವರ ಇಂಗ್ಲಿಷಿನಿಂದ ಸುರಕ್ಷಿತವಾಗಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಎರಡು ಬಾರಿ ಯೋಚಿಸಿ’’ ಎಂದಿದ್ದಾರೆ. ಇನ್ನೊಬ್ಬ ಮಿಹಿರ್ ಶರ್ಮ ಎಂಬವರು ಚೀನಾ ಪಡೆಗಳ ಆಗಮನ ದಿಲ್ಲಿಯಲ್ಲಿನ ಮಂಜಿನ ಸ್ಥಿತಿಯನ್ನು ಅವಲಂಬಿಸಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇನ್ನೊಬ್ಬರಂತೂ ಲಘು ಧಾಟಿಯಲ್ಲಿ ''ಚೀನಾ ತನ್ನ ಪಡೆಗಳ ವಾಹನಗಳಿಗೆ ಮೇಡ್ ಇನ್ ಚೈನಾ ಬಿಡಿಭಾಗಗಳನ್ನು ಉಪಯೋಗಿಸಿಲ್ಲ ಎಂದು ಅಂದುಕೊಂಡಿದ್ದೇನೆ. ಇಲ್ಲದೇ ಹೋದಲ್ಲಿ ಈ ವಾಹನಗಳು ಹಿಮಾಲಯದಲ್ಲಿ ಕೆಟ್ಟು ಹೋಗುವುದಂತೂ ಖಂಡಿತ'' ಎಂದಿದ್ದಾರೆ. ದಿಲ್ಲಿಯು ನಾಲ್ಕೂ ಕಡೆಗಳಿಂದ ಟ್ರಾಫಿಕ್ ಜಾಮ್ ಗಳಿಂದ ರಕ್ಷಿತವಾಗಿದೆಯೆಂದು ಚೀನಾಗೆ ತಿಳಿದಿಲ್ಲ ಎಂದು ಒಬ್ಬರು ಹೇಳಿದರೆ, ಸುಶಾಂತ್ ಎಂಬವರು ಭಾರತೀಯ ಸೇನೆ ಆರು ಗಂಟೆಗಳಿಗೂ ಕಡಿಮೆ ಸಮಯದಲ್ಲಿ ಬೀಜಿಂಗ್ ತಲುಪಬಹುದು ಎಂದು ಚೀನಾಗೆ ಟ್ವೀಟ್ ಮುಖಾಂತರ ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News