×
Ad

ಲಾದೆನ್ ಬೇಟೆಗೆ ನೆರವಾಗಿದ್ದ ವೈದ್ಯನ ಇನ್ನೂ ಬಿಡುಗಡೆಗೊಳಿಸಿಲ್ಲ

Update: 2017-01-18 20:35 IST

ಇಸ್ಲಾಮಾಬಾದ್,ಜ.18: ಅಲ್‌ಖಾಯ್ದಾ ನಾಯಕ ಉಸಾಮಾ ಬಿನ್ ಲಾದೆನ್‌ನ ಬೇಟೆಯಾಡಲು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎಗೆ ನೆರವಾಗಿದ್ದನೆನ್ನಲಾದ ಬಂಧಿತ ಪಾಕ್ ವೈದ್ಯ ಡಾ. ಶೇಖ್ ಅಫ್ರಿದಿ ಅವರನ್ನು ಬಿಡುಗಡೆಗೊಳಿಸಲಾಗಿಲ್ಲ ಅಥವಾ ಆತನನ್ನು ಅಮೆರಿಕಕ್ಕೆ ಹಸ್ತಾಂತರಿಸಿಲ್ಲವೆಂದು ಪಾಕ್ ಬುಧವಾರ ಸ್ಪಷ್ಟಪಡಿಸಿದೆ.

 ಇಂದು ನಡೆದ ಪಾಕ್‌ನ ಮೇಲ್ಮನೆ ಸಂಸತ್ ಕಲಾಪದ ವೇಳೆ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಿದ್ದ ಕಾನೂನು ಸಚಿವ ಝಹೀದ್ ಹಮೀದ್ ಅವರು ಈ ವಿಷಯ ತಿಳಿಸಿದರು. ಕಾನೂನು ತನ್ನದೇ ಆದ ದಾರಿಯಲ್ಲಿ ಸಾಗುತ್ತಿದ್ದು, ನ್ಯಾಯಸಮ್ಮತವಾಗಿ ಅಫ್ರಿದಿಯ ವಿಚಾರಣೆಯನ್ನು ನಡೆಸಲಾಗುವುದು ಎಂದವರು ಹೇಳಿದರು.

2011ರ ಮೇ ತಿಂಗಳಲ್ಲಿ ಅಮೆರಿಕದ ಪಡೆಗಳು ರಹಸ್ಯ ಕಾರ್ಯಾಚರಣೆಯೊಂದನ್ನು ನಡೆಸಿ ಉತ್ತರ ಪಾಕಿಸ್ತಾನದ ಅಬೊಟಾಬಾದ್ ಪಟ್ಟಣದ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದ ಉಸಾಮಾಬಿನ್ ಲಾದೆನ್‌ನನ್ನು ಹತ್ಯೆಗೈದ ಬಳಿಕ ಪಾಕ್ ಪೊಲೀಸರು ಡಾ. ಶೇಖ್ ಅಫ್ರಿದಿಯನ್ನು ಬಂಧಿಸಿದ್ದರು.

ಡಾ.ಶೇಖ್ ಅಫ್ರಿದಿಯು, ಒಸಾಮಾ ಬಿನ್ ಲಾದೆನ್‌ನ ಗುರುತನ್ನು ದೃಢಪಡಿಸಿಕೊಳ್ಳಲು ಸಿಐಎಗೆ ನೆರವಾಗುವುದಕ್ಕಾಗಿ ನಕಲಿ ಲಸಿಕೆ ಅಭಿಯಾನವನ್ನು ನಡೆಸಿ, ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದನೆಂದು ಪಾಕ್ ಆರೋಪಿಸಿದೆ.

ಲಾದೆನ್ ಹತ್ಯೆಯ ಬೆನ್ನಲ್ಲೇ ಅಫ್ರಿದಿಯನ್ನು ಪಾಕ್ ಭದ್ರತಾ ಅಧಿಕಾರಿಗಳು ಬಂಧಿಸಿದ್ದು, ಆತನಿಗೆ ಭಯೋತ್ಪಾದಕ ಗುಂಪುಗಳೊಂದಿಗೆ ನಂಟಿತ್ತೆಂಬ ಆರೋಪವನ್ನು ಹೊರಿಸಿದ್ದರು.

ಅಫ್ರಿದಿಯು ಕಾನೂನು ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ್ದ, ನೆಲದ ಕಾನೂನಿನ ಅಡಿ ಆತ ಅಪರಾಧವನ್ನು ಎಸಗಿದ್ದಾನೆ ಹಾಗೂ ಈಗ ವಿಚಾರಣೆಯನ್ನು ಎದುರಿಸುತ್ತಿದ್ದಾನೆಂದು ಪಾಕ್ ಸರಕಾರವು, ಅಮೆರಿಕದ ಮುಂದೆ ಪುನರುಚ್ಚರಿಸುತ್ತಲೇ ಬಂದಿದೆ ಎಂದು ಝಹೀರ್ ಹಮೀದ ಸದನಕ್ಕೆ ತಿಳಿಸಿದರು.

ತಾನು ಅಧಿಕಾರಕ್ಕೇರಿದ ಕೇವಲ ಎರಡು ನಿಮಿಷಗಳಲ್ಲಿ ಆಫ್ರಿದಿಯನ್ನು ಬಂಧಮುಕ್ತಗೊಳಿಸುವೆನೆಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣಾ ಪ್ರಚಾರದ ವೇಳೆ ಹೇಳಿರುವುದನ್ನು ಪಾಕ್ ಬಲವಾಗಿ ಟೀಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News