ಭಾರತದಿಂದ ಆರ್‌ಸಿಇಪಿ ಒಪ್ಪಂದಕ್ಕೆ ಅಡ್ಡಗಾಲು : ಚೀನಿ ಮಾಧ್ಯಮದ ಟೀಕೆ

Update: 2017-01-18 15:55 GMT

ಬೀಜಿಂಗ್, ಜ.18: ಭಾರತವು ತನ್ನ ಸ್ವಾರ್ಥಕ್ಕಾಗಿ ಸಮಗ್ರ ಪ್ರಾದೇಶಿಕ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದದ ಜಾರಿಗೆ ಅಡ್ಡಗಾಲು ಹಾಕುತ್ತಿದೆಯೆಂದು ಸರಕಾರಿ ಸ್ವಾಮ್ಯದ ಚೀನಿ ಮಾಧ್ಯಮವೊಂದು ಬುಧವಾರ ಟೀಕಿಸಿದೆ. ಬೃಹತ್ ವಾಣಿಜ್ಯ ಒಪ್ಪಂದವಾದ ಆರ್‌ಸಿಇಪಿ ಕಾರ್ಯಗತಗೊಂಡಲ್ಲಿ ಇದರಿಂದ ಭಾರತದ ಆರ್ಥಿಕ ಶಕ್ತಿಯೂ ಹೆಚ್ಚಲಿದೆ ಮಾತ್ರವಲ್ಲ ಪ್ರಾದೇಶಿಕ ಅಭಿವೃದ್ಧಿಗೂ ಹೊಸ ಚೈತನ್ಯವನ್ನು ತುಂಬಲಿದೆಯೆಂದು ಎಂದು ಅದು ಪ್ರತಿಪಾದಿಸಿದೆ.

ಆರ್‌ಸಿಇಪಿ ಒಡಂಬಡಿಕೆಯ ಜಾರಿಯಿಂದ ಚೀನಾ ಹಾಗೂ ಇತರ ಸದಸ್ಯ ರಾಷ್ಟ್ರಗಳಿಗೆ ತನಗಿಂತಲೂ ಹೆಚ್ಚು ಪ್ರಯೋಜನವಾಗಲಿದೆಯೆಂಬ ಸಂಕುಚಿತ ಮನೋಭಾವನೆಯನ್ನು ಭಾರತ ಹೊಂದಿದೆ. ಆದರೆ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸುವುದರಿಂದ ಹಾಗೂ ಪ್ರದೇಶದ ಏಕತೆ ಮತ್ತು ಅರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದರಿಂದ ಮಾತ್ರವೇ ತನ್ನ ಬೆಳವಣಿಗೆ ಸಾಧ್ಯವೆಂಬುದನ್ನು ಭಾರತ ಮನಗಾಣಬೇಕೆಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವು ಹೇಳಿದೆ.

ಆರ್‌ಸಿಇಪಿ ಒಡಂಬಡಿಕೆಯು ಅಸಿಯಾನ್ ಒಕ್ಕೂಟದ ಹತ್ತು ಸದಸ್ಯ ರಾಷ್ಟ್ರಗಳು (ಬ್ರೂನಿ, ಕಾಂಬೋಡಿಯ, ಇಂಡೊನೇಶ್ಯ, ಲಾವೊಸ್, ಮಲೇಶ್ಯ, ಮ್ಯಾನ್ಮಾರ್, ಫಿಲಿಪ್ಪೀನ್ಸ್,ಸಿಂಗಾಪುರ, ಥೈಲ್ಯಾಂಡ್ ಹಾಗೂ ವಿಯೆಟ್ನಾಂ) ಹಾಗೂ ಅದರ ಆರು ಮುಕ್ತ ಪಾಲುದಾರ ರಾಷ್ಟ್ರಗಳನ್ನು (ಆಸ್ಟ್ರೇಲಿಯ, ಚೀನಾ, ಭಾರತ, ಜಪಾನ್, ನ್ಯೂಝಿಲ್ಯಾಂಡ್ ಹಾಗೂ ದ.ಕೊರಿಯ) ಒಳಗೊಂಡಿದೆ.

ನಿರ್ಗಮನ ಒಬಾಮ ಆಡಳಿತವು ರೂಪಿಸಿದ್ದ ಟ್ರಾನ್ಸ್-ಪೆಸಿಫಿಕ್ ಪಾಲುದಾರಿಕೆ (ಟಿಪಿಪಿ) ಒಪ್ಪಂದದಿಂದ ಹಿಂದೆ ಸರಿಯುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ, ಚೀನಾವು ಆರ್‌ಸಿಇಪಿ ಒಡಂಬಡಿಕೆಯ ಜಾರಿಗಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ.

ಆರ್‌ಸಿಇಪಿ ಒಪ್ಪಂದದಡಿ ಚೀನಾದ ಅಗ್ಗದ ದರ್ಜೆಯ ವಸ್ತುಗಳು ಆಮದಾಗುವ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಭಾರತವು ಆ ಒಪ್ಪಂದದ ಜಾರಿಗೆ ಸಹಿಹಾಕಲು ಹಿಂದೇಟು ಹಾಕುತ್ತಿದೆ. ಚೀನಾವು ಅತಿ ಕಡಿಮೆ ಬೆಲೆಯಲ್ಲಿ ತನ್ನ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದರಿಂದ ಭಾರತೀಯ ಕೈಗಾರಿಕೆಗಳಿಗೆ ಭಾರೀ ಹಾನಿಯಾಗುವುದೆಂಬ ಆತಂಕವನ್ನು ಹೊಸದಿಲ್ಲಿ ಹೊಂದಿದೆ.

ಆರ್‌ಸಿಇಪಿ ಒಡಂಬಡಿಕೆಯ ಜಾರಿಯಿಂದ ಚೀನಾ ಹಾಗೂ ಇತರ ಸದಸ್ಯ ರಾಷ್ಟ್ರಗಳಿಗೆ ತನಗಿಂತಲೂ ಹೆಚ್ಚು ಪ್ರಯೋಜನವಾಗಲಿದೆಯೆಂಬ ಸಂಕುಚಿತ ಮನೋಭಾವನೆಯನ್ನು ಭಾರತ ಹೊಂದಿದೆ.

-ಚೀನಿ ಸರಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News