ಒಬಾಮ ಯಶಸ್ವಿ ಆಡಳಿತಗಾರ : ಸಮೀಕ್ಷೆಯಲ್ಲಿ ಶೇ.60 ಅಮೆರಿಕನ್ನರ ಅನಿಸಿಕೆ

Update: 2017-01-18 16:12 GMT

ವಾಶಿಂಗ್ಟನ್,ಜ.18: ಶುಕ್ರವಾರ ಅಧಿಕಾರದಿಂದ ನಿರ್ಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಎರಡು ಅವಧಿಯ ಆಡಳಿತಕ್ಕೆ ಜನಮತ ಸಮೀಕ್ಷೆಯೊಂದರಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸುದ್ದಿಸಂಸ್ಥೆ ಸಿಎನ್‌ಎನ್/ಓಆರ್‌ಸಿ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಒಬಾಮಾ ಅವರ ಕಾರ್ಯನಿರ್ವಹಣೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.60ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಆನಂತರ ಒಬಾಮ ಆಡಳಿತಕ್ಕೆ ದೊರೆತ ಅತಿ ದೊಡ್ಡ ಪ್ರಮಾಣದ ಜನಮೆಚ್ಚುಗೆ ಇದಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಮೂರನೆ ಎರಡರಷ್ಟು (ಶೇ.65) ಮಂದಿ ಒಬಾಮ ಅವರ ಎಂಟು ವರ್ಷಗಳ ಕಾರ್ಯನಿರ್ವಹಣೆ ಯಶಸ್ವಿಯಾಗಿದೆಯೆಂದು ಹೇಳಿದ್ದಾರೆ. ಸುಮಾರು ಅರ್ಧಾಂಶ (ಶೇ.49)ದಷ್ಟು ಮಂದಿ ಒಬಾಮ ಅಧ್ಯಕ್ಷರಾಗಿ ವೈಯಕ್ತಿಕ ನೆಲೆಯಲ್ಲಿ ಯಶಸ್ವಿ ಸಾಧನೆ ತೋರಿದ್ದಾರೆಂದು ಅಭಿಪ್ರಾಯಿಸಿದ್ದಾರೆ.

ಅಮೆರಿಕದ ಇತರ ಅಧ್ಯಕ್ಷರುಗಳ ನಿರ್ಗಮನದ ವೇಳೆಯ ಜನಪ್ರಿಯತೆಗೆ ಹೋಲಿಸಿದರೆ, ಒಬಾಮಾ ಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆದಿದ್ದಾರೆ.
2001ರ ಜನವರಿಯಲ್ಲಿ ಅಧಿಕಾರದಿಂದ ನಿರ್ಗಮಿಸಿದ ಬಿಲ್‌ಕ್ಲಿಂಟನ್‌ಗೆ ಶೇ.66 ಹಾಗೂ 1989ರ ಜನವರಿಯಲ್ಲಿ ನಿರ್ಗಮಿಸಿದ ರೊನಾಲ್ಡ್ ರೇಗನ್‌ಗೆ ಶೇ.64ರಷ್ಟು ಜನಮೆಚ್ಚುಗೆ ವ್ಯಕ್ತವಾಗಿತ್ತು.

ಸಮೀಕ್ಷೆಯಲ್ಲಿ ಶೇ. 25ರಷ್ಟು ಮಂದಿ ಅಮೆರಿಕನ್ನರು ಒಬಾಮ ಅವರು ದೇಶ ಕಂಡ ಶ್ರೇಷ್ಠ ಅಧ್ಯಕ್ಷರುಗಳಲ್ಲೊಬ್ಬರೆಂದು ಹೇಳಿದ್ದಾರೆ. ಶೇ.11 ಮಂದಿ ರೊನಾಲ್ಡ್ ರೇಗನ್, ಶೇ.10 ಮಂದಿ ಬಿಲ್ ಕ್ಲಿಂಟನ್ ಹಾಗೂ ಶೇ. ಐದಕ್ಕಿಂತಲೂ ಕಡಿಮೆ ಮಂದಿ ಜಾರ್ಜ್ ಬುಶ್‌ಗೆ ಆ ಸ್ಥಾನವನ್ನು ನೀಡಿದ್ದಾರೆ.

ಆದಾಗ್ಯೂ, ಶೇ. 23ರಷ್ಟು ಮಂದಿ ಒಬಾಮ ಓರ್ವ ದುರ್ಬಲ ಅಧ್ಯಕ್ಷರೆಂದು ಭಾವಿಸಿದ್ದಾರೆ.ಆದರೆ ಅದಕ್ಕಿಂತಲೂ ಹೆಚ್ಚಿನ ಮಂದಿ ರೇಗನ್, ಕ್ಲಿಂಟನ್ ಅಸಮರ್ಥ ಅಧ್ಯಕ್ಷರಾಗಿದ್ದರೆಂದು ಹೇಳಿದ್ದಾರೆ. ಆದಾಗ್ಯೂ ಅಫ್ಘಾನ್ ಹಾಗೂ ಇರಾಕ್ ಮೇಲೆ ಯುದ್ಧ ಸಾರಿದ್ದ ಜಾರ್ಜ್ ಡಬ್ಲು ಬುಶ್ ಅತ್ಯಂತ ದುರ್ಬಲ ಅಧ್ಯಕ್ಷರೆಂದು ಶೇ.46ಕ್ಕಿಂತಲೂ ಅಧಿಕ ಮಂದಿ ಪರಿಗಣಿಸಿದ್ದಾರೆ.

ಪಕ್ಷವಾರು ಮಟ್ಟದಲ್ಲಿಯೂ ಒಬಾಮ ಆಳ್ವಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಡೆಮಾಕ್ರಾಟ್ ಪಕ್ಷದ ಶೇ. 54ರಷ್ಟು ಮಂದಿ ಒಬಾಮ ಅವರು ದೇಶದ ಶ್ರೇಷ್ಠ ಅಧ್ಯಕ್ಷರಲ್ಲೊಬ್ಬರೆಂದು ಹೇಳಿದರೆ, ಶೇ. 54 ಮಂದಿ ರಿಪಬ್ಲಿಕನ್ನರು ಅವರನ್ನು ಅಸಮರ್ಥರೆಂಬುದಾಗಿ ಪರಿಗಣಿಸಿದ್ದಾರೆ.

ಆರ್ಥಿಕತೆ, ವಿದೇಶಾಂಗ ವ್ಯವಹಾರ ಹಾಗೂ ಜನಾಂಗೀಯ ಸೌಹಾರ್ದತೆ ಮತ್ತಿತರ ವಿಷಯಗಳಲ್ಲಿ ಒಬಾಮ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆಂದು ಹೆಚ್ಚಿನ ಅಮೆರಿಕನ್ನರು ಅಭಿಪ್ರಾಯಿಸಿದ್ದಾರೆ.

ಒಬಾಮ ಅಧಿಕಾರಾವಧಿಯಲ್ಲಿ ಅಮೆರಿಕದ ಸ್ಥಿತಿಗತಿ ಸುಗಮವಾಗಿತ್ತು ಎಂದು ಶೇ. 50 ಮಂದಿ ಹೇಳಿದರೆ, ಉಳಿದ ಶೇ.50ರಷ್ಟು ಮಂದಿ ಚೆನ್ನಾಗಿರಲಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News